ಉದಯವಾಹಿನಿ, ಬೆಂಗಳೂರು: ಲಕ್ನೋ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 5 ವಿಕೆಟ್‌ಗಳಿಂದ ಜಯಗಳಿಸಿದರೂ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಒಂದು ವಿಕೆಟ್ ಪಡೆದ ಜೋಶ್ ಹ್ಯಾಜಲ್‌ವುಡ್‌ಗೆ ನೀಡಿದ್ದು ಯಾಕೆ ಎನ್ನುವ ವಿಚಾರದ ಬಗ್ಗೆ ಈಗ ಕ್ರಿಕೆಟ್‌ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ಈ ಪಂದ್ಯದಲ್ಲಿ ಜೋಶ್ ಹ್ಯಾಜಲ್‌ವುಡ್ 4 ಓವರ್‌ ಎಸೆದು 5 ಎಕಾನಮಿಯಲ್ಲಿ 20 ರನ್‌ ನೀಡಿ 1 ವಿಕೆಟ್‌ ಪಡೆದರೆ ರಸಿಕ್‌ ಸಲಾಂ ದಾರ್‌ 4 ಓವರ್‌ ಎಸೆದು 6 ಎಕಾನಮಿಯಲ್ಲಿ 24 ರನ್‌ ನೀಡಿ 4 ವಿಕೆಟ್‌ ಕಿತ್ತಿದ್ದರು. ಬಹಳ ಮುಖ್ಯವಾಗಿ ಇಬ್ಬರೂ 13 ಡಾಟ್‌ ಬಾಲ್‌ ಎಸೆದಿದ್ದರು. ಹೀಗಿದ್ದರೂ 4 ವಿಕೆಟ್‌ ಪಡೆದ ರಸಿಕ್‌ ದಾರ್‌ ಅವರನ್ನು ಬಿಟ್ಟು ಹ್ಯಾಜಲ್‌ವುಡ್ ಅವರಿಗೆ ಪಂದ್ಯಶ್ರೇಷ್ಠಗೌರವ ನೀಡಿದ್ದು ಯಾಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಆರ್‌ಸಿಬಿ ಪರ ಇನ್ನಿಂಗ್ಸ್‌ನ ಮೊದಲ ಓವರನ್ನು ಭುವನೇಶ್ವರ್‌ ಕುಮಾರ್‌ ಹಾಕಿದರೆ ಎರಡನೇ ಓವರನ್ನು ಹ್ಯಾಜಲ್‌ವುಡ್ ಎಸೆದಿದ್ದರು. ನಾಲ್ಕನೇಯ ಓವರ್‌ ಅನ್ನು ರಸಿಕ್‌ ದಾರ್‌ ಹಾಕಿದ್ದರು. ಹ್ಯಾಜಲ್‌ವುಡ್‌ ತಮ್ಮ ಮೊದಲ ಓವರಿನಲ್ಲಿ 5 ರನ್‌, ಎರಡನೇ ಓವರ್‌ನಲ್ಲಿ 5 ಡಾಟ್‌ ಬಾಲ್‌ ಹಾಕಿ 1 ರನ್‌ ನೀಡಿದ್ದರು. ತಮ್ಮ ಮೂರನೇ ಓವರ್‌ನಲ್ಲಿ ಪೂರನ್‌ ವಿಕೆಟ್‌ ಪಡೆಯುವುದರ ಜೊತೆಗೆ 3 ಡಾಟ್‌ ಬಾಲ್‌ ಎಸೆದು 5 ರನ್‌ ನೀಡಿದ್ದರು. ಅಂದರೆ ಆರ್‌ಸಿಬಿ ಎಸೆದ ಮೊದಲ 7 ಓವರ್‌ಗಳಲ್ಲಿ ಹ್ಯಾಜಲ್‌ವುಡ್‌ ಅವರೇ 3 ಓವರ್‌ ಎಸೆದು 11 ರನ್‌ ಮಾತ್ರ ನೀಡಿದ್ದರು. ಟಿ20ಯಲ್ಲಿ ಪವರ್‌ಪ್ಲೇ ಬಹಳ ಮುಖ್ಯವಾಗಿರುತ್ತದೆ. ಮೊದಲ 6 ಓವರ್‌ಗಳಲ್ಲಿಇಬ್ಬರು ಫೀಲ್ಡರ್‌ಗಳು ಮಾತ್ರ 30 ಯಾರ್ಡ್‌ ಸರ್ಕಲ್‌ ಹೊರಗಡೆ ಇರುತ್ತಾರೆ. ಈ ಸಂರ್ಭದಲ್ಲಿ ಬ್ಯಾಟರ್‌ಗಳು ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿ ಹೆಚ್ಚು ರನ್‌ ಹೊಡೆಯುತ್ತಾರೆ. ಪವರ್‌ ಪ್ಲೇನಲ್ಲಿ ಲಕ್ನೋ ವಿರುದ್ಧ ಹ್ಯಾಜಲ್‌ವುಡ್‌ ಉತ್ತಮ ಬೌಲಿಂಗ್‌ ಎಸೆದು ರನ್‌ ನಿಯಂತ್ರಣ ಮಾಡಿದ್ದಕ್ಕೆ ಪಂದ್ಯಶ್ರೇಷ್ಠ ಗೌರವ ನೀಡಿರಬಹುದು ಎಂದು ವಿಶ್ಲೇಷಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!