ಉದಯವಾಹಿನಿ, ಕ್ರಿಕೆಟ್ ಅಂದ್ರೆ ಕ್ರೇಝ್, ಆದರೆ ಇಲ್ಲಿ ನಡೆದಿದ್ದು ಮಾತ್ರ ಕ್ರೇಝ್​ನ ಪರಮಾವಧಿ! ಪಂದ್ಯಕ್ಕೆ ಕರೆದಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಯುವಕನೊಬ್ಬ, ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದ ವಿಲಕ್ಷಣ ಕೃತ್ಯ ಎಸಗಿದ್ದಾನೆ. ಇಡೀ ಮೈದಾನ ಫೈನಲ್ ಪಂದ್ಯದ ಸಂಭ್ರಮದಲ್ಲಿದ್ದಾಗ, ದಿಢೀರನೆ ಟ್ರ್ಯಾಕ್ಟರ್‌ನೊಂದಿಗೆ ಎಂಟ್ರಿ ಕೊಟ್ಟ ಈ ಭೂಪ, ಇಡೀ ಪಿಚ್ ಅನ್ನೇ ಉಳುಮೆ ಮಾಡಿ ಆಯೋಜಕರಿಗೆ ಬಿಗ್ ಶಾಕ್ ನೀಡಿದ್ದಾನೆ. ಕ್ರೀಡಾ ಸ್ಫೂರ್ತಿಯೇ ಮರೆತ ಈ ಯುವಕನ ಹಠಕ್ಕೆ ಈಗ ಇಡೀ ಪಂದ್ಯಾವಳಿಯೇ ಬಲಿಯಾಗಿದೆ! ಇಂತಹದೊಂದು ವಿಧ್ವಂಸಕ ಕೃತ್ಯ ನಡೆದಿದ್ದು ಮಹಾರಾಷ್ಟದ ಜಳಗಾಂವ್ ಜಿಲ್ಲೆಯ ಧರಣಗಾಂವ್‌ನಲ್ಲಿ..!

ಧರಣಗಾಂವ್‌ನಲ್ಲಿ ‘ಜಳಗಾಂವ್ ರೂರಲ್ ಎಂಎಲ್ಎ ಕಪ್’ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯವು ಅತ್ಯಂತ ರೋಚಕವಾಗಿ ಸಾಗುತ್ತಿತ್ತು. ಆಟಗಾರರು ಮತ್ತು ಪ್ರೇಕ್ಷಕರು ಪಂದ್ಯದ ಸಂಭ್ರಮದಲ್ಲಿದ್ದಾಗ, ಇದ್ದಕ್ಕಿದ್ದಂತೆ ಯುವಕನೊಬ್ಬ ಟ್ರ್ಯಾಕ್ಟರ್‌ನೊಂದಿಗೆ ಮೈದಾನಕ್ಕೆ ನುಗ್ಗಿದ್ದಾನೆ.
ಅಲ್ಲದೆ ನೇರವಾಗಿ ಪಿಚ್​ನತ್ತ ಸಾಗಿದ ಯುವಕ, ಟ್ರ್ಯಾಕ್ಟರ್‌ಗೆ ಅಳವಡಿಸಿದ್ದ ನೇಗಿಲಿನಿಂದ ಪಿಚ್ ಅನ್ನು ಪೂರ್ತಿಯಾಗಿ ಉಳುಮೆ ಮಾಡಿ ಹಾಳುಗೆಡವಿದ್ದಾನೆ. ವರದಿಗಳ ಪ್ರಕಾರ, ಈ ಕೃತ್ಯಕ್ಕೆ ಆಹ್ವಾನದ ವಿಚಾರವೇ ಮುಖ್ಯ ಕಾರಣ ಎನ್ನಲಾಗಿದೆ. ಪಂದ್ಯಾವಳಿಯ ಫೈನಲ್ ಪಂದ್ಯಕ್ಕೆ ಆತನನ್ನು ಅಥವಾ ಸ್ಥಳೀಯ ಪ್ರಮುಖ ನಾಯಕರೊಬ್ಬರನ್ನು ಆಹ್ವಾನಿಸದಿದ್ದಕ್ಕೆ ಕೋಪಗೊಂಡ ಯುವಕ ಈ ರೀತಿ ಪ್ರತಿಕ್ರಿಯಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಕೆಲ ಮೂಲಗಳ ಪ್ರಕಾರ, ಆಟಗಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸದಿದ್ದಕ್ಕೆ ಅಸಮಾಧಾನಗೊಂಡು ಆತ ಈ ವಿಧ್ವಂಸಕ ಕೃತ್ಯ ಎಸಗಿದ್ದಾನೆ.

Leave a Reply

Your email address will not be published. Required fields are marked *

error: Content is protected !!