ಉದಯವಾಹಿನಿ, ಟಿ20 ಕ್ರಿಕೆಟ್ ಲೀಗ್​ಗೆ ಮತ್ತೊಂದು ಟೂರ್ನಿ ಸೇರ್ಪಡೆಯಾಗುತ್ತಿದೆ. ಹೊಸ ಟೂರ್ನಿ ಆಯೋಜನೆಗೊಳ್ಳಲಿರುವುದು ದೂರದ ಯುರೋಪಿನಲ್ಲಿ. ಅದರಂತೆ ಶೀಘ್ರದಲ್ಲೇ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ಗೆ (ETPL) ಚಾಲನೆ ದೊರೆಯಲಿದೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಸಹ-ಮಾಲೀಕತ್ವದ ಈ ಲೀಗ್‌ನಲ್ಲಿ, ಗ್ಲ್ಯಾಸ್ಗೋ ಫ್ರಾಂಚೈಸಿಯನ್ನು ವೆಸ್ಟ್ ಇಂಡೀಸ್​ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಖರೀದಿಸಿದ್ದಾರೆ. ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಕ್ರಿಸ್ ಗೇಲ್ ಅವರು ಕೇವಲ ಈ ತಂಡದ ಸಹ-ಮಾಲೀಕರಷ್ಟೇ ಅಲ್ಲದೆ, ಗ್ಲ್ಯಾಸ್ಗೋ ಮುಗಾಫಿಯನ್ಸ್ ತಂಡದ ಜಾಗತಿಕ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಈ ತಂಡದ ಮಾಲೀಕತ್ವದ ಜವಾಬ್ದಾರಿಯನ್ನು ತನ್ಶಾ ಬಾತ್ರಾ ವಹಿಸಿಕೊಂಡಿದ್ದು, ವಿಪುಲ್ ಅಗರ್ವಾಲ್ ನೇತೃತ್ವದ ‘ಮುಗಾಫಿ ಗ್ರೂಪ್’ ತಂಡದ ಡಿಜಿಟಲ್ ಮತ್ತು ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳಲಿದೆ.
ಸ್ಥಾಪಕರು: ಈ ಲೀಗ್ ಅನ್ನು ಅಭಿಷೇಕ್ ಬಚ್ಚನ್ ಸೇರಿದಂತೆ ಸೌರವ್ ಬ್ಯಾನರ್ಜಿ, ಪ್ರಿಯಾಂಕಾ ಕೌಲ್ ಮತ್ತು ಧೀರಜ್ ಮಲ್ಹೋತ್ರಾ ಅವರು ಜೊತೆಗೂಡಿ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ (ETPL) ಸ್ಥಾಪಿಸಿದ್ದಾರೆ.
ದಿನಾಂಕ: ಚೊಚ್ಚಲ ಸೀಸನ್ ಆಗಸ್ಟ್ 26, 2026 ರಿಂದ ಸೆಪ್ಟೆಂಬರ್ 20, 2026 ರವರೆಗೆ ನಡೆಯಲಿದೆ.
ತಂಡಗಳು: ಗ್ಲ್ಯಾಸ್ಗೋ ಸೇರಿದಂತೆ ಆಮ್‌ಸ್ಟರ್‌ಡ್ಯಾಮ್, ಎಡಿನ್‌ಬರ್ಗ್, ಡಬ್ಲಿನ್, ಬೆಲ್‌ಫಾಸ್ಟ್ ಮತ್ತು ರೊಟರ್‌ಡ್ಯಾಮ್ ನಗರಗಳ ಒಟ್ಟು 6 ತಂಡಗಳು ಸ್ಪರ್ಧಿಸಲಿವೆ.
ಐಸಿಸಿ ಮಾನ್ಯತೆ: ಇದು ಐಸಿಸಿ (ICC) ಮಾನ್ಯತೆ ಪಡೆದ ಯುರೋಪ್‌ನ ಮೊದಲ ಫ್ರಾಂಚೈಸಿ ಆಧಾರಿತ ಟಿ20 ಲೀಗ್ ಆಗಿದೆ.
ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ:  ಕ್ರಿಸ್ ಗೇಲ್ ಅವರಂತಹ ದಿಗ್ಗಜರು ಲೀಗ್‌ಗೆ ಸೇರ್ಪಡೆಗೊಂಡಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಅನ್ನು ಬೆಳೆಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!