ಉದಯವಾಹಿನಿ, ಮುಲ್ಲಾನ್‌ಪುರ: ಪಂಜಾಬ್ ಕಿಂಗ್ಸ್‌ನ ಪ್ರಿಯಾಂಶ್ ಆರ್ಯ ಮತ್ತು ಕೂಪರ್ ಕೊನೊಲಿ ಲಕ್ನೋದ ಆಲ್‌ರೌಂಡರ್ ಮಾರ್ಕ್ರಾಮ್ ಅವರ ಒಂದೇ ಓವರ್‌ನಲ್ಲಿ 32 ರನ್ ಚಚ್ಚಿದ್ದಾರೆ.ಪಂಜಾಬ್ ಕಿಂಗ್ಸ್ 12 ಓವರ್ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ರನ್ ಓಟಕ್ಕೆ ಕಡಿವಾಣ ಹಾಕಲು ರಿಷಭ್ ಪಂತ್ 13ನೇ ಓವರ್ ಎಸೆಯಲು ಮಾರ್ಕ್ರಾಮ್ ಕೈಗೆ ಬಾಲ್ ನೀಡಿದರು.
8ನೇ ಬೌಲರ್ ಆಗಿ ಮಾರ್ಕ್ರಾಮ್ ಎಸೆದ ಮೊದಲ ಮೂರು ಎಸೆತವನ್ನು ಕೊನೊಲಿ ಸಿಕ್ಸ್‌ಗೆ ಅಟ್ಟಿದರು. ನಾಲ್ಕನೇಯ ಎಸೆತ ವೈಡ್ ಆಗಿತ್ತು. ಮರು ಎಸೆತದಲ್ಲಿ ಒಂಟಿ ರನ್ ಓಡಿದ್ದರಿಂದ ಸ್ಟ್ರೈಕ್‌ಗೆ ಪ್ರಿಯಾಂಶ್ ಆರ್ಯ ಬಂದರು. ಆರ್ಯ ಬಂದವರೇ ಕೊನೆಯ ಎರಡು ಎಸೆತದಲ್ಲಿ ಸಿಕ್ಸ್ ಸಿಡಿಸಿದರು. 5 ಸಿಕ್ಸ್, 1 ವೈಡ್, 1 ರನ್ ನಿಂದಾಗಿ ಈ ಓವರ್‌ನಲ್ಲಿ 32 ರನ್ ಬಂದಿತ್ತು. ದುಬಾರಿ ರನ್ ನೀಡಿದ ಬಳಿಕ ಮತ್ತೆ ಮಾರ್ಕ್ರಾಮ್ ಬೌಲಿಂಗ್ ಮಾಡಲಿಲ್ಲ. ಹಾಗೆ ನೋಡಿದರೆ ತಂಡದ ಮೊತ್ತ 3 ರನ್ ಆಗಿದ್ದಾಗ ಪ್ರಭುಸಿಮ್ರಾನ್ ಸಿಂಗ್ ಸೊನ್ನೆಗೆ ಔಟಾಗಿದ್ದರು. ಆದರೆ ಎರಡನೇ ವಿಕೆಟಿಗೆ ಪ್ರಿಯಾಂಶ್ ಆರ್ಯ ಮತ್ತು ಕೊನೊಲಿ ಕೇವಲ 80 ಎಸೆತಗಳಲ್ಲಿ 182 ರನ್ ಜೊತೆಯಾಟವಾಡಿದರು.
