ಉದಯವಾಹಿನಿ, ಮೈಸೂರು: ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಅವಧಿಪೂರ್ವ ನವಜಾತ ಶಿಶು ಗುರುವಾರ ಮೃತಪಟ್ಟಿದ್ದು, ಇರುವೆ ಕಚ್ಚಿದ್ದರಿಂದಲೇ ಘಟನೆ ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮತ್ತೊಂದೆಡೆ, ಆಸ್ಪತ್ರೆಯ ಮುಖ್ಯಸ್ಥರು ಈ ಆರೋಪವನ್ನು ಅಲ್ಲಗಳೆದಿದ್ದು, ಮರಣೋತ್ತರ ಪರೀಕ್ಷೆಯಿಂದ ಸತ್ಯಾಂಶ ತಿಳಿಯಲಿದೆ ಎಂದಿದ್ದಾರೆ.
ಕುವೆಂಪು ನಗರದ ನಿವಾಸಿ ನೀಲಾ ಎಂಬವರಿಗೆ ಏ.15ರಂದು ಅವಧಿಪೂರ್ವ ಗಂಡು ಮಗು ಜನಿಸಿತ್ತು. ಶಿಶುವಿನ ತೂಕ 1 ಕೆ.ಜಿ ಇದ್ದ ಕಾರಣ ಮಕ್ಕಳ ತೀವ್ರ ನಿಗಾ ಘಟಕ (ಐಸಿಯು)ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮಗು  ಮೃತಪಟ್ಟಿತ್ತು.
ತಾಯಿ ಲೀಲಾ ಅವರು ಮಾತನಾಡಿ, “ನಾರ್ಮಲ್ ಡೆಲಿವರಿ ಆಗುತ್ತದೆ ಎಂದು ಆಸ್ಪತ್ರೆಗೆ ದಾಖಲಿಸಿಕೊಂಡರು. ನಂತರ ಶಿಶು ಚೆನ್ನಾಗಿಯೇ ಇತ್ತು. ತೂಕ ಕಡಿಮೆ ಎಂದು ಹೇಳಿ ಐಸಿಯುನಲ್ಲಿರಿಸಿದ್ದರು. ನಾನು ದಿನಾ ಹೋಗಿ ನೋಡುತ್ತಿದ್ದೆ. ನಾಲ್ಕು ದಿನಗಳ ಹಿಂದೆ ಶಿಶುವಿನ ಕಣ್ಣು, ಮೂಗಿಗೆ ಇರುವೆ ಮುತ್ತಿದ್ದವು. ಕೇಳಿದ್ರೆ ಇದೊಂದೇ ಶಿಶು ಅಲ್ಲ, ಬೇರೆ ಶಿಶುಗಳೂ ಇವೆ ನೋಡಿಕೊಳ್ಳಲು ಎಂದು ಹೇಳುತ್ತಿದ್ದರು. ನಾನು ಪ್ರಶ್ನೆ ಮಾಡಿದ್ದಕ್ಕೆ ನನ್ನನ್ನು ಅಲ್ಲಿಂದ ಕಳಿಸಿದರು” ಎಂದರು.
“ಒಂದು ದಿನ ಶಿಶುವಿಗೆ ಇನ್ಫೆಕ್ಷನ್ ಆಗಿದೆ, ಮತ್ತೊಂದು ದಿನ ಜಾಂಡೀಸ್ ಆಗಿದೆ, ಬಳಿಕ ಶಿಶು ಸತ್ತುಹೋಗಿದೆ ಎಂದು ಹೇಳಿದರು. ಇರುವೆ ಕಚ್ಚಿದ್ದರೂ ನೋಡಲಿಲ್ಲ. ಒಂದು ಇಂಜೆಕ್ಷನ್ ಮಾಡೋದಕ್ಕೂ ದುಡ್ಡು ಕೇಳುತ್ತಾರೆ. ಇಲ್ಲಿ ಯಾರೂ ಸರಿಯಾಗಿ ನೋಡುವುದಿಲ್ಲ. ಸರಿಯಾದ ಚಿಕಿತ್ಸೆ ಕೊಡಲ್ಲ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮೃತ ಶಿಶುವಿನ ತಂದೆ ಸಿದ್ಧಾರ್ಥ್ ಮಾತನಾಡಿ, “ಹೆರಿಗೆ ನೋವೆಂದು 15ನೇ ತಾರೀಕಿಗೆ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದೆ. ರಾತ್ರಿ 8:48ಕ್ಕೆ ಡೆಲಿವರಿ ಆಯ್ತು, ನಂತರ ಶಿಶುವನ್ನು ಐಸಿಯುನಲ್ಲಿ ಇಟ್ಟಿದ್ದರು. ಅದಾದ ಮೂರ್ನಾಲ್ಕು ದಿನಗಳ ಕಾಲ ಶಿಶು ಚೆನ್ನಾಗಿ ಆಟವಾಡುತ್ತಾ ಇತ್ತು. 3 ದಿನಗಳ ಬಳಿಕ ಮಗುವನ್ನು ನೋಡಬೇಕು ಎಂದು ನನ್ನ ಹೆಂಡತಿ ಕೇಳಿದಳು. ನಾನು ಕರೆದುಕೊಂಡು ಹೋದೆ, ಅದೇ ದಿನ ಶಿಶುವಿನ ಕಣ್ಣಿನ ಮೇಲೆ ಇರುವೆ ಓಡಾಡುತ್ತಿದ್ದವು, ತಕ್ಷಣ ಈ ಬಗ್ಗೆ ಸಿಬ್ಬಂದಿಯನ್ನು ಕೇಳಿದಾಗ, ಅವರು ಇಲ್ಲ ಸರ್ ಕ್ಲೀನ್ ಮಾಡ್ತೀವಿ ಎಂದು ಹೇಳಿ ಹೊರಗಡೆ ಕಳುಹಿಸಿದರು. ಬಳಿಕ ಶಿಶು 7 ತಿಂಗಳಿಗೆ ಡೆಲಿವರಿ ಆಗಿದ್ದು, ಬಿಳಿರಕ್ತಕಣಗಳು ಕಡಿಮೆಯಾಗಿವೆ. ಆದ್ದರಿಂದ ಶಿಶು ಮೃತಪಟ್ಟಿದೆ ಎಂದು ಹೇಳುತ್ತಿದ್ದಾರೆ. ಇಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಆಸ್ಪತ್ರೆ ಸಿಬ್ಬಂದಿಯ ಬೇಜವಾಬ್ದಾರಿಯಿಂದ ನಮ್ಮ ಶಿಶು ಮೃತಪಟ್ಟಿದೆ” ಎಂದು ಬೇಸರದಿಂದ ನುಡಿದರು.

ಚೆಲುವಾಂಬ ಆಸ್ಪತ್ರೆ ಪ್ರಭಾರ ಮುಖ್ಯಸ್ಥ ಡಾ.ಲಕ್ಷ್ಮಿಕಾಂತ್ ಮಾತನಾಡಿ, “ಮಗು 7 ತಿಂಗಳಿಗೆ ಅವಧಿ ಪೂರ್ವವಾಗಿ ಜನಿಸಿದ್ದು, 1 ಕೆ.ಜಿ ತೂಕ ಇತ್ತು. ಆದ್ದರಿಂದ ಮಗುವನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದೆವು. 7ನೇ ದಿನಕ್ಕೆ ಮಗು ಸಾವನ್ನಪ್ಪದೆ. ಆದರೆ ಇರುವೆ ಕಚ್ಚಿದ್ದರಿಂದ ಮಗು ಸತ್ತಿದೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ” ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!