ಉದಯವಾಹಿನಿ, ಬೆಳಗಾವಿ: ತರಕಾರಿ, ಹಣ್ಣು, ಹೂವು ಮಾರಾಟ ಮಾಡುವ ಸೋಗು ಹಾಕಿಕೊಂಡು, ಯಾರೂ ಇಲ್ಲದ ಮನೆಗಳನ್ನು ಟಾರ್ಗೆಟ್ ಮಾಡಿ, ರಾತ್ರಿ ಹೊತ್ತು ಕೀಲಿ ಮುರಿದು ಮನೆಗಳ್ಳತನ ಮಾಡುತ್ತಿದ್ದ ಐವರು ಖದೀಮರನ್ನು ಬಂಧಿಸುವಲ್ಲಿ ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ವೈಭವ ನಗರದ ರಿಹಾನ್ ಮೈನುದ್ದೀನ್ ದಫೇದಾರ(ಪಠಾಣ)(18), ವೀರಭದ್ರ ನಗರ 1ನೇ ಕ್ರಾಸ್ನ ಮಲೀಕ್ ಖಲೀಲ ಹುಬ್ಬಳ್ಳಿ(26), ವೀರಭದ್ರ ನಗರದ 1ನೇ ಕ್ರಾಸ್ ಬೆಳಗಾವಿಯ ಖಲೀಲ್ ಇಸ್ಮಾಯಿಲ್ ಹುಬ್ಬಳ್ಳಿ(57), ಕುಡಚಿ ತಾಲೂಕಿನ ಜುಗಾಯಿ ನಗರ ಮಾಸಾಬದ ಅರಮಾನ್ ಅಕ್ಷರ್ ಶೇಖ್(18), ಶಾನವಾಜ ಸಿರಾಜುದ್ದೀನ ಪಠಾಣ(23) ಬಂಧಿತರು. ಇವರಿಂದ 64,47,690 ರೂ. ಮೌಲ್ಯದ 415.98 ಗ್ರಾಂ ಚಿನ್ನಾಭರಣ, 3,45,735 ರೂ. ಮೌಲ್ಯದ 1329.75 ಗ್ರಾಂ ಬೆಳ್ಳಿಯ ಆಭರಣಗಳು ಸೇರಿ ಒಟ್ಟು 67 ಲಕ್ಷ ಮೌಲ್ಯದ 93,425 ರೂ. ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು, “ಬೆಳಗಾವಿ ನಗರದ ಅಮನ ನಗರ, ಉಜ್ವಲ ನಗರ, ಮಾರುತಿ ನಗರ, ಶಾಹು ನಗರ, ಹಾಗೂ ವೀರಭದ್ರ ನಗರದಲ್ಲಿ ಮನೆಗಳ ಕೀಲಿಯನ್ನು ಮುರಿದು ಮನೆಯಲ್ಲಿ ಇಟ್ಟಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಇದಾಗಿದ್ದು, ಐವರು ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ತಿಳಿಸಿದರು.
“ಹಗಲು ಹೊತ್ತು ತರಕಾರಿ, ಹೂವು, ಹಣ್ಣು ಮಾರಾಟ ಮಾಡುವ ಸೋಗಿನಲ್ಲಿ ಬೀದಿ ಬೀದಿ ಸುತ್ತುವ ಆರೋಪಿಗಳು, ಕೀಲಿ ಹಾಕಿದ ಮನೆಗಳನ್ನು ಗುರುತಿಸಿ, ರಾತ್ರಿ ಹೊತ್ತು ಬಂದು ಕೀಲಿ ಮುರಿದು, ಕೃತ್ಯ ಎಸಗುತ್ತಿದ್ದರು. ಆರೋಪಿಗಳ ಪತ್ತೆಗೆ ಮಾಳಮಾರುತಿ ಪೊಲೀಸರನ್ನು ಒಳಗೊಂಡ ತಂಡ ರಚಿಸಿದ್ದೆವು. ನಮ್ಮ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಒಟ್ಟು ಹನ್ನೊಂದು ಪ್ರಕರಣಗಳು ಪತ್ತೆಯಾಗಿವೆ” ಎಂದು ಹೇಳಿದರು. “ಇದೀಗ ನಾವು ಉಪವಿಭಾಗಗಳಿಗೆ ಅನುಗುಣವಾಗಿ ತಂಡಗಳನ್ನು ರಚನೆ ಮಾಡಿದ್ದೇವೆ. ಕಳವಿನ ಬಗ್ಗೆ ನಮಗೆ ಸುಳಿವು ಇದೆ. ಮುಂಬರುವ ದಿನಗಳಲ್ಲಿ ಕಳ್ಳತನವನ್ನು ಪತ್ತೆ ಮಾಡುತ್ತೇವೆ. ಮನೆಗೆ ಕೀಲಿ ಹಾಕಿ ಹೊರಗಡೆ ಹೋಗುವಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರೆ, ಮನೆಯ ಬಳಿ ಪೊಲೀಸರನ್ನು ಗಸ್ತಿಗೆ ನಿಯೋಜಿಸಲಾಗುತ್ತದೆ. ಇದರಿಂದ ಕಳ್ಳತನ ಪ್ರಕರಣಗಳನ್ನು ತಪ್ಪಿಸಬಹುದು” ಎಂದು ಪೊಲೀಸ್ ಆಯುಕ್ತರು ಸಾರ್ವಜನಿಕರಿಗೆ ತಿಳಿಸಿದ್ದಾರೆ.
