ಉದಯವಾಹಿನಿ, ಇಷ್ಟು ದಿನ 2026 ರ ಐಪಿಎಲ್‌ನಲ್ಲಿ ಬರಿ ಬ್ಯಾಟ್ಸ್ಮನ್ಗಳ ಅಬ್ಬರವೇ ಹೆಚ್ಚಿತ್ತು. ಹೀಗಾಗಿ ಪ್ರತಿ ಪಂದ್ಯದಲ್ಲೂ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆ ಹರಿಯುತ್ತಿತ್ತು. ಆದರೆ ಕಳೆದ 24 ಗಂಟೆಗಳಲ್ಲಿ ಆಟಗಾರರ ಕಳಪೆ ಫಿಲ್ಡಿಂಗ್ನಿಂದಾಗಿ ಐಪಿಎಲ್ ಸುದ್ದಿಯಾಗಿದೆ. ಕಳದೆ 24 ಗಂಟೆಗಳ ಅವಧಿಯಲ್ಲಿ ಮೂರು ಪಂದ್ಯಗಳು ನಡೆದಿವೆ. ಈ ಮೂರು ಪಂದ್ಯಗಳಿಂದ ಸೇರಿ ಬರೋಬ್ಬರಿ 20 ಕ್ಕೂ ಹೆಚ್ಚು ಕ್ಯಾಚ್‌ಗಳನ್ನು ಕೈಬಿಡಲಾಗಿದೆ. ಗುಜರಾತ್ ಟೈಟಾನ್ಸ್-ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯದಂತೆಯೇ ಪಂಜಾಬ್-ದೆಹಲಿ ಮತ್ತು ರಾಜಸ್ಥಾನ-ಹೈದರಾಬಾದ್ ಪಂದ್ಯಗಳಲ್ಲಿಯೂ ಕಳಪೆ ಫಿಲ್ಡಿಂಗ್ ಕಂಡುಬಂದಿದೆ.
ಏಪ್ರಿಲ್ 26ರ ಭಾನುವಾರದಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಮತ್ತು ಗುಜರಾತ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ಕೇವಲ 37 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಲ್ಲದೆ 50 ರನ್‌ಗಳನ್ನು ಪೂರೈಸಲು 12 ಓವರ್‌ಗಳನ್ನು ತೆಗೆದುಕೊಂಡಿತು. ಹೀಗಾಗಿ ತಂಡವು 100 ರನ್ ತಲುಪುವುದು ಕೂಡ ಕಷ್ಟಕರವಾಗಿತ್ತು. ಆದರೆ ಗುಜರಾತ್ ತಂಡದ ಕಳಪೆ ಫಿಲ್ಡಿಂಗ್ ಸಿಎಸ್ಕೆಗೆ ವರದಾನವಾಯಿತು.
ಶಿವಂ ದುಬೆಗೆ 3 ಜೀವದಾನ
ಗುಜರಾತ್ ತಂಡದ ಫೀಲ್ಡಿಂಗ್ ತುಂಬಾ ಕಳಪೆಯಾಗಿತ್ತು. ತಂಡವು 20 ಓವರ್‌ಗಳಲ್ಲಿ ಐದು ಕ್ಯಾಚ್‌ಗಳನ್ನು ಕೈಬಿಟ್ಟಿತು. ಇವುಗಳಲ್ಲಿ ಶಿವಂ ದುಬೆ ಅವರದ್ದೇ ಮೂರು ಕ್ಯಾಚ್ಗಳು ಸೇರಿದ್ದವು. ದುಬೆ 6 ರನ್ ಗಳಿಸಿದ್ದಾಗ ವಿಕೆಟ್ ಕೀಪರ್ ಜೋಸ್ ಬಟ್ಲರ್ ಮೊದಲ ಕ್ಯಾಚ್ ಕೈಚೆಲ್ಲಿದರು. ನಂತರ, ದುಬೆ 11 ರನ್ ಗಳಿಸಿದ್ದಾಗ ಸಾಯಿ ಸುದರ್ಶನ್ ಎರಡನೇ ಕ್ಯಾಚ್ ಬಿಟ್ಟರು. ದುಬೆ 22 ರನ್‌ಗಳಿಸಿದ್ದಾಗ ಮೊಹಮ್ಮದ್ ಸಿರಾಜ್ ಕೂಡ ಮತ್ತೊಂದು ಜೀವದಾನ ನೀಡಿದರು. ಆದಾಗ್ಯೂ, ಮೂರು ಜೀವದಾನಗಳ ಹೊರತಾಗಿಯೂ ದುಬೆ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ.
ಕ್ಯಾಚ್ ಕೈಬಿಟ್ಟ ಗಿಲ್
ದುಬೆ ಮಾತ್ರವಲ್ಲ, ಕಾರ್ತಿಕ್ ಶರ್ಮಾ ಮತ್ತು ಜೇಮಿ ಓವರ್ಟನ್ಗೂ ಜೀವದಾನ ಸಿಕ್ಕಿತು. 18 ನೇ ಓವರ್‌ನಲ್ಲಿ, ಕಾರ್ತಿಕ್ ಶರ್ಮಾ ಡೀಪ್ ಸ್ಕ್ವೇರ್ ಲೆಗ್‌ಗೆ ಶಾಟ್ ಆಡಿದರು. ಆದರೆ ಮಾನವ್ ಸುತಾರ್ ಮತ್ತು ರಶೀದ್ ಖಾನ್ ನಡುವಿನ ಸಂವಹನದ ಕೊರತೆಯಿಂದಾಗಿ ಈ ಕ್ಯಾಚ್ ಡ್ರಾಪ್ ಆಯಿತು. ನಂತರ, ಮುಂದಿನ ಓವರ್‌ನಲ್ಲಿ, ಜೇಮೀ ಓವರ್ಟನ್ ಮಿಡ್-ಆಫ್‌ಗೆ ಶಾಟ್ ಹೊಡೆದರು. ಗುಜರಾತ್ ನಾಯಕ ಶುಭ್ಮನ್ ಗಿಲ್ ಕ್ಯಾಚ್ ತೆಗೆದುಕೊಳ್ಳಲು ಡೈವ್ ಮಾಡಿದರು ಆದರೆ ಹಿಡಿಯುವಲ್ಲಿ ವಿಫಲರಾದರು.
