ಉದಯವಾಹಿನಿ, ರಾಜಸ್ಥಾನ್ ರಾಯಲ್ಸ್ ತಂಡ ತೊರೆದು ಸಿಎಸ್​ಕೆ ತಂಡವನ್ನು ಕೂಡಿಕೊಂಡಿರುವ ಸಂಜು ಸ್ಯಾಮ್ಸನ್ 2026 ರ ಐಪಿಎಲ್‌ನಲ್ಲಿ ಇದುವರೆಗೆ 2 ಭರ್ಜರಿ ಶತಕಗಳನ್ನು ಬಾರಿಸಿದ್ದಾರೆ. ಅದರಲ್ಲೂ ಕೇವಲ 4 ಪಂದ್ಯಗಳ ಅಂತರದಲ್ಲಿ ಎರಡು ಶತಕಗಳನ್ನು ಬಾರಿಸಿರುವ ಸಂಜು ಸಿಎಸ್​ಕೆ ಪರ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಸಂಜು ಮತ್ತೊಂದು ದಾಖಲೆ ಬರೆದಿದ್ದಾರೆ. ಸಿಎಸ್​​ಕೆ ಪರ ಎರಡು ಶತಕಗಳ ಇನ್ನಿಂಗ್ಸ್ ಆಡಿರುವ ಸಂಜುಗೆ ಗುಜರಾತ್ ಟೈಟಾನ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಸಂಜು ಕೇವಲ 11 ರನ್ ಗಳಿಸಲಷ್ಟೇ ಶಕ್ತರಾದರು. ಆದಾಗ್ಯೂ ಸಂಜು ಈ 11 ರನ್​ಗಳ ಮೂಲಕ ಐಪಿಎಲ್‌ನಲ್ಲಿ 5,000 ರನ್‌ಗಳನ್ನು ಪೂರೈಸಿದರು. ಹಾಗೆಯೇ ಅತಿ ವೇಗವಾಗಿ 5000 ರನ್ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಐಪಿಎಲ್​ನಲ್ಲಿ ಇದುವರೆಗೆ 185 ಪಂದ್ಯಗಳಲ್ಲಿ 180 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿರುವ ಸಂಜು 31.69 ರ ಸರಾಸರಿಯಲ್ಲಿ 5000 ರನ್​ಗಳ ಗಡಿ ದಾಟಿದ್ದಾರೆ. ಈ ರನ್ ಪೂರೈಸಲು ಸಂಜು ಕೇವಲ 3,555 ಎಸೆತಗಳನ್ನು ತೆಗೆದುಕೊಂಡಿರುವುದು ಅವರನ್ನು ಅತಿ ವೇಗವಾಗಿ 5000 ರನ್ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಗೆ ಕಾರಣವಾಗಿದೆ. ಈ ಮೂಲಕ ಸಂಜು ಸ್ಯಾಮ್ಸನ್ ಸಿಎಸ್​ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಅವರ ದಾಖಲೆಯನ್ನು ಅವರು ಮುರಿದಿದ್ದಾರೆ. ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಐಪಿಎಲ್‌ನಲ್ಲಿ 5000 ರನ್​ಗಳನ್ನು ಪೂರೈಸಲು 3620 ಎಸೆತಗಳನ್ನು ತೆಗೆದುಕೊಂಡಿದ್ದರು. ಆದರೆ ಸಂಜು 65 ಎಸೆತಗಳನ್ನು ಕಡಿಮೆ ತೆಗೆದುಕೊಳ್ಳುವ ಮೂಲಕ 5000 ರನ್ ಪೂರೈಸಿ ಸುರೇಶ್ ರೈನಾ ಅವರನ್ನು ಹಿಂದಿಕ್ಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!