ಉದಯವಾಹಿನಿ, ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳಿಗಿಂತ ಐಪಿಎಲ್ ಎಷ್ಟು ಶಕ್ತಿಶಾಲಿ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಿ ಸಿಕ್ಕಿದೆ. ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಯನ್ನು ಆಡಲು ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ನಿರಾಕರಿಸಿದ್ದು, ಐಪಿಎಲ್ 2026ರ ಪ್ಲೇ-ಆಫ್ ಪಂದ್ಯಗಳಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ನೆಲದಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಟ್ರಾವಿಸ್ ಹೆಡ್ ಅವರಂತಹ ದಿಗ್ಗಜರನ್ನು ಎದುರಿಸಲು ಕಾತರದಿಂದ ಕಾಯುತ್ತಿತ್ತು. ಆದರೆ, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಆಟಗಾರರಿಗೆ ಐಪಿಎಲ್ ಒಪ್ಪಂದ ಪೂರ್ಣಗೊಳಿಸಲು ಹಸಿರು ನಿಶಾನೆ ತೋರಿದ್ದರಿಂದ, ಪಾಕಿಸ್ತಾನ ಈಗ ಎರಡನೇ ದರ್ಜೆಯ ಆಸ್ಟ್ರೇಲಿಯಾ ತಂಡಕ್ಕೆ ಆತಿಥ್ಯ ವಹಿಸುವ ಅನಿವಾರ್ಯತೆಗೆ ಸಿಲುಕಿದೆ. ವಿಶ್ವ ಕ್ರಿಕೆಟ್‌ನ ದೊಡ್ಡ ತಂಡವೊಂದು ತನ್ನ ಸರಣಿಗಿಂತ ಐಪಿಎಲ್‌ಗೆ ಹೆಚ್ಚು ಒತ್ತು ನೀಡಿದ್ದು ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗ ಉಂಟುಮಾಡಿದೆ.
ಸರಣಿ ಮತ್ತು ಐಪಿಎಲ್ ನಡುವಿನ ಸಂಘರ್ಷ:
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಮೇ 30ರಿಂದ ಜೂನ್ 4ರವರೆಗೆ ನಡೆಯಲಿದೆ. ಇದೇ ಸಮಯದಲ್ಲಿ ಐಪಿಎಲ್‌ನ ಅಂತಿಮ ಹಂತದ ಪಂದ್ಯಗಳು (ಪ್ಲೇ-ಆಫ್ ಮತ್ತು ಫೈನಲ್) ನಡೆಯಲಿರುವುದರಿಂದ ಆಟಗಾರರ ಲಭ್ಯತೆಯ ಬಗ್ಗೆ ಗೊಂದಲವಿತ್ತು. ಆದರೆ, ಈಗ ಕ್ರಿಕೆಟ್ ಆಸ್ಟ್ರೇಲಿಯಾ (CA) ತನ್ನ ಆಟಗಾರರಿಗೆ ಐಪಿಎಲ್ ಒಪ್ಪಂದವನ್ನು ಪೂರ್ಣಗೊಳಿಸಲು ಅನುಮತಿ ನೀಡಿದೆ.
