ಉದಯವಾಹಿನಿ, ಆರ್‌ಸಿಬಿ ಹಾಗೂ ಮುಂಬೈ ನಡುವೆ ನಡೆದ ಹೈವೋಲ್ಟೇಜ್ ಐಪಿಎಲ್ ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಎಂಎಸ್ ಧೋನಿ ಅವರ ದಾಖಲೆ ಸರಿಗಟ್ಟಿದ್ದಾರೆ. ಹೌದು, ಐಪಿಎಲ್‌ನಲ್ಲಿ ಅತಿಹೆಚ್ಚು ಪಂದ್ಯ ಆಡಿದ ಆಟಗಾರರ ಪಟ್ಟಿಯಲ್ಲಿ ಭಾರತದ ಮೂವರು ದಿಗ್ಗಜ ಆಟಗಾರರು ಈಗ ಒಟ್ಟಿಗೆ ಅಗ್ರಸ್ಥಾನದಲ್ಲಿದ್ದಾರೆ. ರಾಯ್ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೋ-ಕೋ ಜೋಡಿ ಈ ಸಾಧನೆ ಮಾಡಿದ್ದು, ಇದು ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ 278ನೇ ಐಪಿಎಲ್ ಪಂದ್ಯವಾಗಿತ್ತು. ಈ ಮೂಲಕ ಅವರು ಎಂಎಸ್ ಧೋನಿ ಅವರ ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ ದಾಖಲೆಯನ್ನು ಈ ಜೋಡಿ ಏಕಕಾಲದಲ್ಲಿ ಸರಿಗಟ್ಟಿದ್ದಾರೆ. ಧೋನಿ ಕಳೆದ ವರ್ಷವೇ 278ನೇ ಪಂದ್ಯವಾಡಿ ಮೊದಲ ಸ್ಥಾನದಲ್ಲಿದ್ದರು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾನುವಾರ ಈ ದಾಖಲೆಯನ್ನು ಮಾಡಿದ್ದಾರೆ. ಈ ಮೂವರು 2008ರಿಂದಲೂ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಇನ್ನು ರವೀಂದ್ರ ಜಡೇಜಾ 265 ಪಂದ್ಯಗಳನ್ನು ಆಡಿದ್ದು, ದಿನೇಶ್ ಕಾರ್ತಿಕ್ 257 ಪಂದ್ಯಗಳನ್ನು ಆಡಿದ್ದಾರೆ.
