
ಉದಯವಾಹಿನಿ, ಬೀದರ್ : ಪ್ರತಿಯೊಬ್ಬರು ಶಿಕ್ಷಣ ಪಡೆದಾಗ ಮಾತ್ರ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯವಿದೆ. ಈ ದಿಸೆಯಲ್ಲಿ ನಾವು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಮುಖಂಡ ಸಾಗರ ಬಸವರಾಜ ಪಾಟೀಲ ಕೊಳ್ಳೂರ ಹೇಳಿದರು. ಔರಾದ್ ತಾಲೂಕಿನ ಕೊಳ್ಳೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಶಾಲೆ ಉದ್ಘಾಟನೆಗೊಂಡು 25 ವರ್ಷಗಳು ಪುರೈಸಿದ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಒಬ್ಬ ವ್ಯಕ್ತಿ ಜ್ಞಾನ ಹೊಂದಿ ಉನ್ನತ ಮಟ್ಟಕ್ಕೆ ಹೋಗಬೇಕಾದರೇ ಗುರುವಿನ ಶಿಷ್ಯ ಆಗಲೇಬೇಕು. ಗುರಿಸಾಧಿಸಲು ಗುರುಗಳ ಮಾರ್ಗದರ್ಶನ ಅಗತ್ಯ. ಇಲ್ಲವಾದರೆ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ. ಯಾವುದೇ ಕಾರಣಕ್ಕೂ ಸಮಯ ವ್ಯರ್ಥ ಮಾಡಬಾರದು. ಅರ್ಥವಾಗದ ವಿಚಾರವನ್ನು ಗುರುಗಳಿಂದ ತಿಳಿದುಕೊಳ್ಳಬೇಕು ಎಂದರು.
ಶಾಲೆಯ ಎಲ್ಲಾ ಮಕ್ಕಳಿಗೆ ಜಾಮೆಟ್ರಿಕ್ ಬಾಕ್ಸ್ ಉಡುಗೊರೆ ನೀಡಿ ಪ್ರೋತ್ಸಾಹಿಸಿದರು. ಮುಖಂಡ ಜೈಪಾಲ ರೆಡ್ಡಿ ಬರದಾಪುರ ಮಾತನಾಡಿ, ಶಿಲ್ಪಿ ಕಲ್ಲಿಗೆ ಉಳಿ ಪೆಟ್ಟು ನೀಡುವುದು ಕಲ್ಲನ್ನು ಸುಂದರ ಶಿಲೆಯನ್ನಾಗಿ ರೂಪಿಸಲು. ಹಾಗೆಯೇ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತಾರೆ. ಉತ್ತಮ ಸಮಾಜಕ್ಕೆ ಗುರುಗಳ ಪಾತ್ರಪ್ರಮುಖವಾಗಿದೆ. ಗುರುಗಳಿಂದ ಮಾತ್ರ ಉತ್ತಮ ಪ್ರಜೆ ರೂಪಿಸಲು ಸಾಧ್ಯ ಎಂದು ನುಡಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ರಿಜವಾನಾ ಬೆಗಂ, ತಾಪಂ ಮಾಜಿ ಸದಸ್ಯ ವಾಮನರಾವ ಪಾಟೀಲ, ಸುರ್ಯಕಾಂತ ಖೆಳಗೆ, ಬಾಬುಮಿಯ್ಯಾ, ಸಿದ್ದಪ್ಪ ಶೆಂಬೆಳ್ಳೆ, ಚಾಂದಪಾಶಾ, ಅಶೋಕ ಕೊಳ್ಳೂರ, ಬಂಡೆಪ್ಪ ದೇಗಲವಾಡೆ, ವಿಜಯಕುಮಾರ್ ಹೋನಶಟ್ಟೆ, ಮುಖ್ಯ ಶಿಕ್ಷಕ ಸುರೇಶ್ ಪಾಂಡ್ರೆ, ಕಲ್ಲಪ್ಪ ಬೊರಾಳೆ, ದತ್ತಾತ್ರಿ ಪಾಟೀಲ, ರಾಜಕುಮಾರ ಪಾಂಚಾಳ, ನಾಗನಾಥ ಸಾಕರೆ, ನರಸಪ್ಪ ಚಿಗನೂರ, ದಶರಥ, ಅಶೋಕ ಹೋಂಡಾಳೆ, ರಾಜಕುಮಾರ ದೇಗಲವಾಡೆ, ಬಾಲಾಜಿ ಸೇರಿದಂತೆ ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
