ಉದಯವಾಹಿನಿ, ಗುರುಗ್ರಾಮ: ಹರಿಯಾಣದ ನೂಹ್‌ನಲ್ಲಿ ಸಂಭವಿಸಿದ ಹಿಂಸಾಚಾರ ವೇಳೆ ಕಲ್ಲು ತೂರಾಟ ನಡೆಸುವ ಸಲುವಾಗಿ ಬಳಸಿಕೊಂಡಿದ್ದರು ಎನ್ನಲಾದ ಹಲವು ಕಟ್ಟಡಗಳನ್ನು ಅಧಿಕಾರಿಗಳು ಭಾನುವಾರ ನೆಲಸಮ ಮಾಡಿದ್ದಾರೆ. ಜಿಲ್ಲಾಡಳಿತ ಕೈಗೊಂಡಿರುವ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆ ನಾಲ್ಕನೇ ದಿನವೂ ಮುಂದುವರಿಯಿತು.
16 ಅಕ್ರಮ ಕಟ್ಟಡಗಳನ್ನು ಗುರುತಿಸಲಾಗಿದ್ದು, ಬುಲ್ಡೋಜರ್ ಬಳಸಿ ತೆರವುಗೊಳಿಸಲಾಯಿತು ಎಂದು ತಿಳಿಸಿದ್ದಾರೆ. ‘ವಿಎಚ್‌ಪಿ ಹಮ್ಮಿಕೊಂಡಿದ್ದ ಶೋಭಾಯಾತ್ರೆ ವೇಳೆ ಸಂಭವಿಸಿದ ಹಿಂಸಾಚಾರದ ವೇಳೆ ಗೂಂಡಾಗಳು ಕಲ್ಲುಗಳನ್ನು ತೂರಾಟ ನಡೆಸಲು ಈ ಅಕ್ರಮ ಕಟ್ಟಡಗಳನ್ನು ಬಳಸಿಕೊಂಡಿದ್ದರು’ ಎಂದು ಉಪವಿಭಾಗಾಧಿಕಾರಿ ಅಶ್ವನಿಕುಮಾರ್ ಹೇಳಿದ್ದಾರೆ. ‘ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಅನುಕೂಲವಾಗುವಂತೆ ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ವರೆಗೆ ಕರ್ಫ್ಯೂ ಸಡಿಲಿಸಲಾಗಿತ್ತು’ ಎಂದು ಜಿಲ್ಲಾಧಿಕಾರಿ ಧೀರೇಂದ್ರ ಖಡ್ಗಟಾ ಹೇಳಿದ್ದಾರೆ.
ನಲ್ಹಾರ್ ವೈದ್ಯಕೀಯ ಕಾಲೇಜಿಗೆ ಸೇರಿದ 2.6 ಎಕರೆ ಪ್ರದೇಶದಲ್ಲಿ ಸೇರಿದಂತೆ 12 ವಿವಿಧ ಜಾಗಗಳಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟಡಗಳನ್ನು ಜಿಲ್ಲಾಡಳಿತ ಶನಿವಾರ ತೆರವುಗೊಳಿಸಿತ್ತು.
