ಉದಯವಾಹಿನಿ, ನವದೆಹಲಿ,
ಮೋದಿ ಉಪನಾಮ ಕುರಿತು ಟೀಕೆ ಮಾಡಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸದೀಯ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ. ರಾಹುಲ್ ಗಾಂಧಿ ಅವರಿಗೆ ಗುಜರಾತ್‍ನ ಸೂರತ್ ನ್ಯಾಯಾಲಯ ನೀಡಿದ್ದ ಶಿಕ್ಷೆಗೆ ಸುಪ್ರೀಂಕೋರ್ಟ್ ಕಳೆದ ವಾರ ತಡೆಯಾಜ್ಞೆ ನೀಡಿದ ಹಿನ್ನಲೆಯಲ್ಲಿ ಅವರ ಸಂಸದ ಸ್ಥಾನಮಾನವನ್ನು ಮರುಸ್ಥಾಪಿಸಲಾಗಿದೆ.
ಲೋಕಸಭೆಯ ಸೆಕ್ರೆಟರಿಯೇಟ್‍ನಿಂದ ಅಧಿಸೂಚನೆಯಲ್ಲಿ ರಾಹುಲ್ ಗಾಂಧಿಯವರ ಸಂಸದ ಸ್ಥಾನಮಾನವನ್ನು ಮರುಸ್ಥಾಪಿಸಲಾಗಿದೆ ಎಂದು ತಿಳಿಸಿದೆ. ಇದರಿಂದಾಗಿ ಈ ವಾರ ಎನ್‍ಡಿಎ ಸರ್ಕಾರದ ವಿರುದ್ದ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ.
2019ರಲ್ಲಿ ಕೋಲಾರದಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಸೂರತ್‍ನ ವಿಚಾರಣಾ ನ್ಯಾಯಾಲಯ ಮಾರ್ಚ್‍ನಲ್ಲಿ ನೀಡಿದ್ದ ತೀರ್ಪನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಈ ನ್ಯಾಯಾಲಯ ನೀಡಿದ ತೀರ್ಪಿನಿಂದ ರಾಹುಲ್ ಗಾಂಧಿ ಸಂಸತ್ ಸ್ಥಾನದಿಂದ ಅನರ್ಹರಾಗಿದ್ದರು.
