ಉದಯವಾಹಿನಿ, ಹವಾಯಿ: ವಿಶ್ವದ ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ನ ಐತಿಹಾಸಿಕ ದ್ವೀಪ ರಾಜ್ಯ ಹವಾಯಿಯಲ್ಲಿ ಉಂಟಾದ ಭಾರಿ ಕಾಡ್ಗಿಚ್ಚು ದ್ವೀಪರಾಜ್ಯದ ಮವ್ವಿ ಪಟ್ಟಣವನ್ನು ವ್ಯಾಪಿಸಿದ್ದು, ಪಟ್ಟಣದ ಬಹುತೇಕ ಭಾಗವನ್ನು ಬೆಂಕಿಯ ಕೆನ್ನಾಲಿಗೆ ಭಸ್ಮಗೊಳಿಸಿದೆ.
ಜನಪ್ರಿಯ ಪ್ರವಾಸಿ ತಾಣವಾದ ಲಹೈನಾ ಪಟ್ಟಣ ಸೇರಿದಂತೆ ಹಲವು ಕಡೆಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಡೋರಾ ಚಂಡಮಾರುತದಿಂದಾಗಿ ಬೆಂಕಿಯ ಕೆನ್ನಾಲಿಗೆ ವೇಗವಾಗಿ ಎಲ್ಲೆಡೆ ವ್ಯಾಪಿಸುತ್ತಿದೆ ಎಂದು ರಾಷ್ಟ್ರೀಯ ಹವಾಮಾನಗಳ ಸೇವಾ ವಿಭಾಗ ಪ್ರಕಟಿಸಿದೆ. ಈಗಾಗಲೇ ಆರು ಮಂದಿಯನ್ನು ಬಲಿ ಪಡೆದಿರುವ ಈ ವ್ಯಾಪಕ ಕಾಡ್ಗಿಚ್ಚಿನಿಂದ ಕಾಪಾಡಲು ಲಭ್ಯವಿರುವ ಎಲ್ಲ ಒಕ್ಕೂಟ ಆಸ್ತಿಗಳನ್ನು ಕಳುಹಿಸಿಕೊಡಲು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಆದೇಶಿಸಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಮೆರಿಕದ ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆ ಬೆಂಬಲ ನೀಡಿದ್ದು, ಸಾಗರ ವಿಭಾಗ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನು ಅಗ್ನಿಶಾಮಕ ಉಪಯೋಗಕ್ಕೆ ಬಳಸಲಾಗುತ್ತಿದೆ ಎಂದು ಬೈಡನ್ ಸ್ಪಷ್ಟಪಡಿಸಿದ್ದಾರೆ. ಹವಾಯಿ ರಾಷ್ಟ್ರೀಯ ಕಾವಲು ಪಡೆ ಚಿನೂಕ್ ಹೆಲಿಕಾಪ್ಟರ್‌ಗಳನ್ನು ಶೋಧ ಮತ್ತು ಪರಿಹಾರ ಕಾರ್ಯಾಚರಣೆಗೆ ಕ್ರೋಢೀಕರಿಸಿದೆ. ಸಾರಿಗೆ ಇಲಾಖೆ ವಾಣಿಜ್ಯ ವಿಮಾನಯಾನ ಕಂಪನಿಗಳ ಜತೆಗೂಡಿ ದ್ವೀಪರಾಜ್ಯದಿಂದ ಪ್ರವಾಸಿಗಳನ್ನು ಕರೆತರುವ ಪ್ರಯತ್ನ ನಡೆಸಿವೆ. ಆಂತರಿಕ ಮತ್ತು ಕೃಷಿ ಇಲಾಖೆಗಳು ಪುನಶ್ಚೇತನ ಕಾರ್ಯಗಳಿಗೆ ನೆರವಾಗಲು ಸಜ್ಜಾಗಿದೆ ಎಂದು ಬೈಡನ್ ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷರು, ತಮ್ಮ ವೈಯಕ್ತಿಕ ಅಪಾಯವನ್ನು ಕಡೆಗಣಿಸಿ ಜನರನ್ನು ರಕ್ಷಿಸಲು ಹೋರಾಡುತ್ತಿರುವ ಅಗ್ನಿಶಾಮಕ ದಳ ಸಿಬ್ಬಂದಿಯ ಸಾಹಸವನ್ನು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!