ಉದಯವಾಹಿನಿ, ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯ ಸಿದ್ಧತೆ ಪರಿಶೀಲನೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಲುವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದಿನಿಂದ ಮೂರು ದಿನಗಳ ಪಶ್ಚಿಮ ಬಂಗಾಳ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಪ್ರವಾಸದ ಸಮಯದಲ್ಲಿ, ಜೆಪಿ ನಡ್ಡಾ ಅವರು ಪಂಚಾಯತ್ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ೨೦೨೪ರ ಸಿದ್ಧತೆ ಪರಿಶೀಲನೆ, ಬಂಗಾಳ ಬಿಜೆಪಿ ಕೋರ್ ಕಮಿಟಿ ಸಮಿತಿ ಸದಸ್ಯರು ಸಂಸದರು ಮತ್ತು ಶಾಸಕರೊಂದಿಗೆ ಸರಣಿ ಸಭೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ನಡೆದ ಗ್ರಾಮೀಣ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು ಗೆದ್ದಿರುವವರು ಹಾಗೂ ಹಿಂಸಾಚಾರಕ್ಕೆ ಬಲಿಯಾದವರನ್ನು ಭೇಟಿ ಮಾಡಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
೨೦೨೧ ರ ವಿಧಾನಸಭಾ ಚುನಾವಣೆಯ ನಂತರ ಪಕ್ಷದ ರಾಜ್ಯ ಘಟಕದ ಆಂತರಿಕ ಕಚ್ಚಾಟ ಮತ್ತು ಪಕ್ಷಾಂತರಗಳಿಂದ ಪೀಡಿತವಾಗಿರುವ ಸಮಯದಲ್ಲಿ ಮತ್ತು ಕಳೆದ ತಿಂಗಳು ನಡೆದ ಪಂಚಾಯತ್ ಚುನಾವಣೆಯಲ್ಲಿ ಅದರ ಮತ ಗಳಿಕೆಯಲ್ಲಿ ತೀವ್ರ ಕುಸಿತ ಕಂಡಿರುವ ಸಮಯದಲ್ಲಿ ಬಿಜೆಪಿ ಅಧ್ಯಕ್ಷರ ಭೇಟಿ ಮಹತ್ವ ಪಡೆದುಕೊಂಡಿದೆ.
