
ಉದಯವಾಹಿನಿ, ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಇಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ 16 ಜನರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ. ಪಿಂಡಿ ಭಟ್ಟಿಯಾನ್ ಬಳಿಯ ಪೈಸಲಾಬಾದ್ ಮೋಟರ್‍ವೇಯಲ್ಲಿ ಸುಮಾರು 40 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರ ಬಸ್ಸೊಂದು ಡೀಸೆಲ್ ಡ್ರಮ್‍ಗಳನ್ನು ಸಾಗಿಸುತ್ತಿದ್ದ ಪಿಕ್-ಅಪ್ ಟ್ರಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ವಾಹನಗಳು ಬೆಂಕಿಗೆ ಆಹುತಿಯಾಗಿ ಸಾವನ್ನಪ್ಪಿದವರಲ್ಲಿ ಅನೇಕ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಮಾಡಿದೆ. ಕರಾಚಿಯಿಂದ ಇಸ್ಲಾಮಾಬಾದ್‍ಗೆ ತೆರಳುತ್ತಿದ್ದ ಬಸ್‍ಗೆ ಬೆಳಗಿನ ಜಾವ 4 ಗಂಟೆಗೆ ಪಿಂಡಿ-ಭಟ್ಟಿಯಾನ್ ಇಂಟರ್‍ಚೇಂಜ್ ಬಳಿ ಪಿಕ್-ಅಪ್ ಟ್ರಕ್‍ಗೆ ಡಿಕ್ಕಿ ಹೊಡೆದ ಸ್ವಲ್ಪ ಸಮಯದ ನಂತರ ಬೆಂಕಿ ಆವರಿಸಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಪಹಾದ್ ತಿಳಿಸಿದ್ದಾರೆ.
ಗಾಯಾಳುಗಳನ್ನು ಪಿಂಡಿ ಭಟ್ಟಿಯಾನ್ ಮತ್ತು -ಪೈಸಲಾಬಾದ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವೈದ್ಯಕೀಯ ಅಧಿಕ್ಷಕರು ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ. ಪಾಕಿಸ್ತಾನದಾದ್ಯಂತ ಸಾಮಾನ್ಯವಾಗಿ ಕಂಡುಬರುವ ರಸ್ತೆ ಅಪಘಾತಗಳು ಪ್ರತಿದಿನ ಹಲವಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದು ಆ ನಾಡಿನ ದೌರ್ಭಾಗ್ಯವೇ ಸರಿ.
