
ಉದಯವಾಹಿನಿ, ಸುರಪುರ : ತಾಲ್ಲೂಕಿನ ಬಂಡೇರದೊಡ್ಡಿ ಗ್ರಾಮಕ್ಕೆ ಕಳೆದ ಒಂದು ವಾರದಿಂದ ಸರಿಯಾದ ಸಮಯಕ್ಕೆ ವಿದ್ಯುತ್ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದು, ಕೇಳಲು ಹೋದರೆ ಲೋಡ್ ಶೆಡ್ಡಿಂಗ್ ಹಾಗೂ ಲೈನ್ ಪಾರ್ಟ್ ಎಂದು ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ರೈತರು ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ರೈತರು ಕಳೆದ 15 ದಿನಗಳಿಂದ ಸಮಯಕ್ಕೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ, ಲೈನ್ ಮ್ಯಾನ್ ಮತ್ತು ಅಧಿಕಾರಿಗಳಿಗೆ ಕರೆ ಮಾಡಿದರೆ ಸರಿಯಾದ ಸ್ಪಂದನೆ ಇಲ್ಲ, ಒಣಬೇಸಾಯದ ರೈತರಿಗೆ ದಿನದ ಏಳು ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಹೇಳುತ್ತಿದ್ದು ಕಳೆದ ಒಂದು ವಾರದಿಂದ ಸರಿಯಾಗಿ ಒಂದೇ ಒಂದು ಗಂಟೆ ಕೂಡ ವಿದ್ಯುತ್ ನೀಡಿಲ್ಲ. ಹಣದ ಆಸೆಗೆ ಬಿದ್ದು ಲೈನ್ ಮ್ಯಾನ್ ಗಳು NGO ಲೈನ್ ಕೂಡ ಹಳ್ಳದ ದಂಡೆಯಲ್ಲಿರುವ ಪಂಪ್ ಸೆಟ್ ಹೊಂದಿರುವ ರೈತರಿಗೆ ನೀಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ರೈತರ-ರೈತರ ಮದ್ಯೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದು, ಒಂದು ಮೂಗಿಗೆ ಬೆಣ್ಣೆ ಒಂದು ಮೂಗಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಮಳೆ ಹಿನ್ನಡೆಯಾದ ಕಾರಣದಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತವಾಗಿವೆ, ಹತ್ತಿ, ಮೆಣಸಿನಕಾಯಿ,ಶೇಂಗಾ ಮತ್ತು ತೊಗರಿ ಬೆಳೆಗಳು ನೀರಿಲ್ಲದೆ ಒಣಗಿ ಹೋಗುತ್ತಿದ್ದು ,ಅಧಿಕಾರಿಗಳು ಸರಿಯಾಗಿ ವಿದ್ಯುತ್ ನೀಡದೇ ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಸ್ಥಿತಿ ಸರಿದೂಗಿಸದೇ ಇದ್ದಲ್ಲಿ ರೈತರೆಲ್ಲರೂ ಸೇರಿ ಕೆಇಬಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
