ಉದಯವಾಹಿನಿ, ಕುಶಾಲನಗರ : ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಪುನರ್ ನಿರ್ಮಾಣ ಸಂಬಂಧ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರ ಉಪಸ್ಥಿತಿಯಲ್ಲಿ ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಕ್ಯಾಂಟೀನ್ ಸಭಾಂಗಣದಲ್ಲಿ ಸುದೀರ್ಘ ಸಮಾಲೋಚನಾ ಸಭೆಯು ಮಂಗಳವಾರ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನಿರ್ಮಾಣ ಸಂಬಂಧ ಎಲ್ಲರ ಸಹಕಾರ ಪಡೆಯುವ ನಿಟ್ಟಿನಲ್ಲಿ ಸಭೆ ಆಹ್ವಾನಿಸಲಾಗಿದೆ. ಸದ್ಯ ಈಗಿರುವ ಪ್ರತಿಮೆಯನ್ನು ಸರಿಪಡಿಸಿ ಪುನರ್ ನಿರ್ಮಾಣ ಮಾಡುವಂತಾಗಬೇಕು ಎಂದರು.
ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರು ಮಾತನಾಡಿ ಈಗಿರುವ ಪ್ರತಿಮೆಯನ್ನು ತ್ವರಿತವಾಗಿ ಪುನರ್ ಸ್ಥಾಪಿಸಬೇಕು ಎಂದು ಸಲಹೆ ಮಾಡಿದರು.
೫೦ ವರ್ಷಗಳ ಹಿಂದೆ ಪ್ರತಿಮೆ ಸ್ಥಾಪಿಸುವ ನಿಟ್ಟಿನಲ್ಲಿ ಶ್ರಮಿಸಲಾಗಿತ್ತು. ಜನರಲ್ ತಿಮ್ಮಯ್ಯ ಅವರ ೩೦-೩೫ ಪೋಟೋಗಳನ್ನು ಸಂಗ್ರಹಿಸಿ ಅದರಲ್ಲಿ ಎತ್ತರದ ಪೋಟೋವನ್ನು ಆಯ್ಕೆ ಮಾಡಿ ಪ್ರತಿಮೆ ನಿರ್ಮಾಣ ಮಾಡಲಾಗಿತ್ತು. ಈ ರೀತಿಯ ಪ್ರತಿಮೆ ನಿರ್ಮಿಸುವುದು ಕಷ್ಟಸಾಧ್ಯವಾಗಲಿದೆ. ಆದ್ದರಿಂದ ಹೊಸ ಪ್ರತಿಮೆ ಬದಲಾಗಿ, ಈಗಿರುವ ಪ್ರತಿಮೆಯನ್ನು ಸರಿಪಡಿಸಿ ಪುನರ್ ಸ್ಥಾಪಿಸಬೇಕಿದೆ ಎಂದು ಎಂ.ಸಿ.ನಾಣಯ್ಯ ಅವರು ಹೇಳಿದರು. ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಎಂ.ಪಿ.ಮುತ್ತಪ್ಪ. ಪ್ರಮುಖರಾದ ತೆನ್ನಿರಾ ಮೈನಾ ಪುಲಿಯಂಡ ಜಗದೀಶ್ ಅವರುಗಳು ಮಾತನಾಡಿ ಸಲಹೆ ನೀಡಿದರು.ಪ್ರಮುಖರಾದ ಮಂಜು ಚಿನ್ನಪ್ಪ ಅವರು ಮಾತನಾಡಿ ಪ್ರತಿಮೆಗೆ ಮೂರು ನಾಲ್ಕು ಕಡೆ ರಂದ್ರವಾಗಿದ್ದು, ಭಗ್ನವಾದ ಪ್ರತಿಮೆಯನ್ನು ಪುನರ್ ಸ್ಥಾಪಿಸಬಹುದೇ ಎಂಬ ಬಗ್ಗೆ ಯೋಚಿಸಬೇಕಿದೆ ಎಂದರು. ಪ್ರಮುಖರಾದ ಚೆಯ್ಯಂಡ ಸತ್ಯ ಅವರು ಮಾತನಾಡಿ ಈಗಿರುವ ಪ್ರತಿಮೆ ಉತ್ತಮವಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಎಂದರು. ಪ್ರಮುಖರಾದ ಟಿ.ಪಿ.ರಮೇಶ್ ಅವರು ಮಾತನಾಡಿ ಮಡಿಕೇರಿಯ ವಿವಿಧ ವೃತ್ತಗಳಲ್ಲಿ ‘ಸಿಗ್ನಲ್ ಲೈಟ್’ ಅಳವಡಿಸಬೇಕು ಎಂದು ಅವರು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು ಎಂದರು.ಪ್ರಮುಖರಾದ ಚುಮ್ಮಿ ದೇವಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಹಶೀಲ್ದಾರ್ ಪ್ರವೀಣ್ ಕುಮಾರ್, ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ, ಪೌರಾಯುಕ್ತರಾದ ವಿಜಯ, ಎಂಜಿನಿಯರ್ ಸಿದ್ದೇಗೌಡ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಧನಂಜಯ ಇತರರು ಇದ್ದರು.
