ಉದಯವಾಹಿನಿ,ಕೆ.ಆರ್.ಪೇಟೆ: ಭಾರತದಂಥಹ ಬೃಹತ್ ದೇಶದಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ತೀರಾ ಕಡಿಮೆ ಇದೆ. ಇಂದಿನ ಯುವಕರು ಹೆಚ್ಚುಹೆಚ್ಚಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟವನ್ನು ಉಧ್ಘಾಟಿಸಿ ಮಾತನಾಡಿದರು.
ಕ್ರೀಡೆಗಳು ಮಾನವನಿಗೆ ಅವಿಭಾಜ್ಯ ಅಂಗವಾಗಿದ್ದು ನಾವೆಲ್ಲರೂ ಎಳೆಯ ವಯಸ್ಸಿನಿಂದ ಮುಪ್ಪಿನವರೆಗೂ ವಿವಿಧ ರೀತಿಯ ಕ್ರೀಡೆಗಳಲ್ಲಿ ಭಾಗವಹಿಸುತ್ತೇವೆ. ನೂರ ಮುವ್ವತ್ತು ಕೋಟಿಗೂ ಅಧಿಕ ಜನಸಂಖ್ಯೆಗೆ ಹೋಲಿಸಿದರೆ ಭಾರತದೇಶದಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳ ಸಂಖ್ಯೆ ಹಾಗೂ ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ತೀರಾ ಕಡಿಮೆಯಿದೆ. ಇಂದು ಕ್ರೀಡಾ ಕ್ಷೇತ್ರದಲ್ಲಿ ವಿಫುಲವಾದ ಅವಕಾಶಗಳಿದ್ದು ವಿದ್ಯಾರ್ಥಿಗಳು ಇವುಗಳನ್ನು ಬಳಸಿಕೊಳ್ಳಬೇಕು. ಕ್ರೀಡೆಗಳು ನಮಗೆ ಶಿಸ್ತುಬದ್ದ ಜೀವನ, ದೈಹಿಕ ಸಮತೋಲನ, ಬೆಳವಣಿಗೆ, ಉತ್ತಮ ಆರೋಗ್ಯ ಮುಂತಾದುವುಗಳನ್ನು ಒದಗಿಸುತ್ತವೆ. ಆದ್ದರಿಂದ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳು ಉತ್ಸಾಃ ತೋರುವ ಕ್ರೀಡೆಗಳಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ನಿರಂತರ ಅಭ್ಯಾಸ, ಕಠಿಣ ಪರಿಶ್ರಮದಿಂದ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉದ್ದೇಶಿತ ಕ್ರೀಡೆಗಳಲ್ಲಿ ಸಾಧನೆ ಮಾಡಬಹುದು. ಇದರಿಂದ ನಿಮಗೂ ನಿಮ್ಮ ಶಾಲೆ, ನಿಮ್ಮ ಪೋಷಕರಿಗೆ ಹಾಗೂ ಗ್ರಾಮಕ್ಕೆ, ತಾಲ್ಲೂಕು, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.
ಇದೇ ಸಂಧರ್ಭದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಹಿರಿಯ ಉಪಾದ್ಯಕ್ಷ ಆನಂದ್‌ಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್ ಕಾರ್ಯದರ್ಶಿ ಲಕ್ಷ್ಮಣಗೌಡ, ಸಂಘಟನಾ ಕಾರ್ಯದರ್ಶಿ ಜಿ.ಎಸ್.ಮಂಜು, ಶಿಕ್ಷಣ ಸಂಯೋಜಕ ಕೃಷ್ಣನಾಯಕ್, ತಾಲ್ಲೂಕು ಎಸ್ಸಿಎಸ್ಟಿ ನೌಕರರ ಸಂಘದ ಅಧ್ಯಕ್ಷ ಕಟ್ರಯೋಗೇಶ್, ಶಿವಲಿಂಗೇಗೌಡ ಸೇರಿದಂತೆ ಹಲವರು ಹಾಜರಿದ್ದರು.
