
ಉದಯವಾಹಿನಿ , ನಾಗಮಂಗಲ : ವಿದ್ಯಾರ್ಥಿ ತರಗತಿಗಳಿಗೆ ಸರಿಯಾಗಿ ಬರುತ್ತಿಲ್ಲ ಎಂದು ಪೋಷಕರಿಗೆ ಮಾಹಿತಿ ನೀಡಿದ್ದಕ್ಕೆ ಆಕ್ರೋಶಗೊಂಡ ಯುವಕ ಶಿಕ್ಷಕನಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿ.ಜಿ ನಗರ ಡಿಪ್ಲೊಮಾ ಕಾಲೇಜಿನಲ್ಲಿ ನಡೆದಿದೆ.
ಬಿ.ಜಿ ನಗರ ಡಿಪ್ಲೊಮಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅವರೇಗೆರಿ ಗ್ರಾಮದ ಉದಯ್ ಗೌಡ ಎಂಬ ಯುವಕ ಸರಿಯಾಗಿ ತರಗತಿಗೆ ಬರುತ್ತಿರಲಿಲ್ಲ. ಈ ಮಾಹಿತಿಯನ್ನು ಶಿಕ್ಷಕ ಚಂದನ್ ಎಂಬುವವರು ಮನೆಯವರಿಗೆ ತಿಳಿಸಿದ್ದಾರೆ.
ಇದರಿಂದ ಕೋಪಗೊಂಡ ಯುವಕ ಶಾಲೆಗೆ ಲಾಂಗ್ ಜೊತೆ ತೆರಳಿ ಶಿಕ್ಷಕನಿಗೆ ಅವಾಜ್ ಹಾಕಿದ್ದಾನೆ. ನನ್ನ ವಿಷಯ ತಂದೆತಾಯಿಗೆ ಯಾಕೆ ಹೇಳಿದ್ದು ಎಂಬ ಪ್ರಶ್ನೆ ಮೂಲಕ ಮೊಂಡುತನ ಪ್ರದರ್ಶನ ಮಾಡಿದ್ದಾನೆ.ಇನ್ನೂ ಯುವಕ ಲಾಂಗ್ ತೋರಿಸಿದ ಹಿನ್ನಲೆಯಲ್ಲಿ ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು ವಶಕ್ಕೆ ಪಡೆದು ತಪ್ಪೊಪ್ಪಿಗೆ ಬರೆಯಿಸಿಕೊಂಡು ಕಳುಹಿಸಿದ್ದಾರೆ. ಆದರೆ ಯುವಕನ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.
