ಉದಯವಾಹಿನಿ , ಹೊಸಕೋಟೆ : ದೇವರ ದರ್ಶನ ಪಡೆಯುವುದರಿಂದ ಮನಸ್ಸು ಶುದ್ದವಾಗುತ್ತದೆ. ಮನುಷ್ಯನಲ್ಲಿ ಮಾನವೀಯ ಸದ್ಗುಣಗಳನ್ನು ಬೆಳೆಸುವ ಪುಣ್ಯ ಕ್ಷೇತ್ರಗಳು ದೇವಾಲಯ ಆಗಿರುವುದರಿಂದ ಶಾಂತಿ, ನೆಮ್ಮದಿ ಪಡೆಯಲು ದೇವರ ಮೊರೆ ಹೋಗಬೇಕಾಗುತ್ತದೆ ಎಂದು ಮಾಜಿ ಸಚಿವ ಎನ್. ನಾಗರಾಜ್ ತಿಳಿಸಿದರು.
ತಾಲೂಕಿನ ನಂದಗುಡಿ ಹೋಬಳಿಯ ಮೋತಕದಹಳ್ಳಿಯಲ್ಲಿ ನಡೆದ ಶ್ರೀರಾಧಾ ರುಕ್ಮಣಿ ಸಮೇತ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಜೀಣೋದ್ಧಾರ ಪ್ರತಿಷ್ಠಾಪನೆ ಹಾಗೂ ಮಹಾ ಕುಂಭಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮನುಷ್ಯನ ಮನಸ್ಸು ಯಾವಾಗಲೂ ಸ್ವಾರ್ಥವನ್ನು ಬಯಸುತ್ತದೆ. ಸಮಸ್ಯೆಯಾದರೆ ಶಾಂತಿ ನೆಮ್ಮದಿಗಾಗಿ ದೇವರ ಮೊರೆ ಹೋಗುತ್ತಾರೆ. ದೇವಾಲಯಗಳಲ್ಲಿ ಶಾಂತಿಯ ವಾತಾವರಣ ನಿರ್ಮಿಸಬೇಕು. ಎಲ್ಲರ ಹಿತಕ್ಕಾಗಿ ಪ್ರೀತಿ ವಿಶ್ವಾಸ ಮನೋಭಾವನೆಗಳನ್ನು ಬೆಳೆಸಿಕೊಂಡಾಗ ಮಾತ್ರ ಗ್ರಾಮಗಳಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ.
ನಮ್ಮ ಹಿರಿಯರು ಜನರಲ್ಲಿ ಭಕ್ತಿ-ಭಾವ, ಆಚಾರ-ವಿಚಾರ, ಸಹಬಾಳ್ವೆಯ ಏಕತೆಯನ್ನು ಮೂಡಿಸುವ ಸಲುವಾಗಿ ದೇವರೆಂಬ ಅಗೋಚರ ಶಕ್ತಿಯನ್ನು ಬೆಳೆಸಿ, ಕಾಲ-ಕಾಲಕ್ಕೆ ಗ್ರಾಮಸ್ಥರು ಒಟ್ಟಾಗಿ ಬೆರೆತು ದೇವತಾ ಕಾರ್ಯಗಳನ್ನು ನಡೆಸುತ್ತಾ ಗ್ರಾಮಗಳಲ್ಲಿ ಶಾಂತಿ ಸೌಹಾರ್ದತೆ ಬೆಳೆಯುವಂತಹ ಸಂಸ್ಕಾರವನ್ನು ರೂಢಿಸಿದ್ದಾರೆ ಎಂದರು.
ಉದ್ಯಮಿ ಚಿಕ್ಕ ರೇವಣ್ಣ ಮಾತನಾಡಿ, ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ದೇವಸ್ಥಾನಗಳಿಗೆ ವಿಶಿಷ್ಠ ಸ್ಥಾನವಿದೆ. ನಮ್ಮ ಪೂರ್ವಿಕರು ಬಿಟ್ಟು ಹೋಗಿರುವ ಬಳುವಳಿಗಳಲ್ಲಿ ಒಂದಾಗಿದೆ. ದೇವಾಲಯಗಳಲ್ಲಿ ಕಾಲ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ದೇವಾಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿ ಗುರುತರವಾದ ಕೆಲಸವನ್ನು ದಾನಿಗಳು ಹಾಗೂ ಗ್ರಾಮಸ್ಥರು ಇದರ ಹೊಣೆಯನ್ನು ಹೊರಬೇಕಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರನ್ನು ಸನ್ಮಾನಿಸಲಾಯಿತು.ಶುಭ ಬ್ರಾಹ್ಮೀ ಮುಹೂರ್ತದಲ್ಲಿ ಗಂಗಾ ಪೂಜೆ, ಆಲಯ ಪ್ರವೇಶ, ಗಣಪತಿ ಪೂಜೆ, ಕಳಶರಾಧನೆ, ದುರ್ಗಾ ಹೋಮ, ದೇವತಾ ಪ್ರತಿಷ್ಠಾಪನೆ, ಪ್ರಾಣಪ್ರತಿಷ್ಠೆ, ಪಂಚಾಮೃತಾಭಿಷೇ , ಪೂರ್ಣಾಹುತಿ, ಬಲಿಹರಣ, ಕುಂಭಾಭಿಷೇಕ, ಮಹಾ ಮಂಗಳಾರತಿ, ತೀರ್ಥ, ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ ಮುನಿರಾಜು, ಮಾಜಿ ಅಧ್ಯಕ್ಷ ಕೆ.ಸಿ. ನಾರಾಯಣಪ್ಪ, ಸದಸ್ಯರಾದ ಶ್ರೀನಾಥ್, ನಂದಿನಿ ಚೆನ್ನಕೇಶವ, ಭಾಗ್ಯ ಮುನಿಕೃಷ್ಣಪ್ಪ, ಮಾಜಿ ಸದಸ್ಯರಾದ ಪ್ರಸಾದ್, ಡಿ.ಮಂಜುನಾಥ್, ಎಂಪಿಸಿಎಸ್ ಕಾರ್ಯದರ್ಶಿ ಎಂ.ಎA. ಮುನಿರಾಜು ಮುಖಂಡ ಎಂ.ಎನ್. ಶ್ರೀನಿವಾಸ್, ಟ್ರಸ್ಟಿನ ಅಧ್ಯಕ್ಷ ರಾಜಣ್ಣ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

 

Leave a Reply

Your email address will not be published. Required fields are marked *

error: Content is protected !!