ಉದಯವಾಹಿನಿ,ದೆಹಲಿ : ಅಮೆಜಾನ್​ ಕಂಪನಿಯ ಹಿರಿಯ ಮ್ಯಾನೇಜರ್​ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿ ಹತ್ಯೆಗೈದಿದ್ದಾರೆ.
ನವದೆಹಲಿ: ಆನ್​ಲೈನ್​ ಶಾಪಿಂಗ್​ ವೆಬ್​ಸೈಟ್​ ಅಮೆಜಾನ್​ ಕಂಪನಿಯಲ್ಲಿ ಹಿರಿಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಹರ್​ಪ್ರೀತ್​ ಗಿಲ್​ (36) ಕೊಲೆಯಾದ ವ್ಯಕ್ತಿಯಾಗಿದ್ದು, ಇವರ ಸಂಬಂಧಿ ಗೋವಿಂದ್​ ಸಿಂಗ್​ ಎಂಬುವವರು ಕೂಡ ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಲ್ಲಿನ ಭಜನಪುರ ಪ್ರದೇಶದ ಸುಭಾಷ್ ವಿಹಾರ ಪ್ರದೇಶದಲ್ಲಿ ಕಳೆದ ರಾತ್ರಿ 11.20ರ ಸುಮಾರಿಗೆ ಐವರು ದುಷ್ಕರ್ಮಿಗಳ ತಂಡ ಇಬ್ಬರ ಮೇಲೂ ಗುಂಡಿನ ದಾಳಿ ನಡೆಸಿದೆ. ಅಮೆಜಾನ್​​ನಲ್ಲಿ ಮ್ಯಾನೇಜರ್​ ಆಗಿದ್ದ ಗಿಲ್​ ಅವರಿಗೆ ತಲೆಗೆ ಗುಂಡು ಹಾರಿಸಲಾಗಿದೆ. ತಲೆಯ ಬಲಭಾಗದ ಕಿವಿಯ ಹಿಂದೆ ಹೊಕ್ಕ ಗುಂಡು ಇನ್ನೊಂದು ಬದಿಯಿಂದ ಹೊರಗಡೆ ಬಂದಿದೆ ಎಂದು ದೆಹಲಿಯ ಈಶಾನ್ಯ ವಿಭಾಗದ ಉಪ ಪೊಲೀಸ್​ ಆಯುಕ್ತ ಜೋಯ್​ ಟೆಕ್ರಿ ತಿಳಿಸಿದ್ದಾರೆ.ಗುಂಡೇಟಿನ ನಂತರ ಗಿಲ್​ ಅವರನ್ನು ಜಗ್​ ಪ್ರವೇಶ್ ಚಂದ್ರ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಗಾಯಾಳು ಸಿಂಗ್​ ಅವರನ್ನು ಲೋಕ್​ ನಾಯಕ್​ ಜೈಪ್ರಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಿಲ್​ ಹಾಗೂ ಸಿಂಗ್​ ಇಬ್ಬರು ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್​ ಹಾಗೂ ಬೈಕ್​ ಮೇಲೆ ಬಂದ ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ಮಾಡಿದೆ. ಈ ಕೃತ್ಯಕ್ಕೆ ಈವರೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ಹಾಗೂ ದಾಳಿಕೋರರ ಪತ್ತೆಗೆ ಆರು ಪೊಲೀಸ್​ ತಂಡಗಳನ್ನು ರಚಿಸಲಾಗಿದೆ. ಅಲ್ಲದೇ, ಆರೋಪಿಗಳ ಗುರುತು ಪತ್ತೆ ಹಚ್ಚಲು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!