ಉದಯವಾಹಿನಿ,ಬಿಹಾರ : ರಾಜ್ಯದ ವೈಶಾಲಿಯಲ್ಲಿ ತ್ರಿವಳಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದು, ಪತಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ನಂತರ, ಕಾಜಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಆತಂಕ ಮೂಡಿಸಿದೆ.
ವೈಶಾಲಿ (ಬಿಹಾರ): ಬಿಹಾರದ ವೈಶಾಲಿಯಲ್ಲಿ ಕಾಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂಡಿ ಗ್ರಾಮದ ಮನೆಯೊಂದರಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರಿಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಅದೇ ಸಮಯದಲ್ಲಿ ಮಹಿಳೆಯ ಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಮೃತ ದೇಹಗಳನ್ನು ಗಮನಿಸಿದರೆ, ಹರಿತವಾದ ಆಯುಧದಿಂದ ಹಲ್ಲೆ ನಡೆಸಿರುವಂತಿದೆ. ಮಹಿಳೆಯ ಪತಿಗೆ ಪ್ರಜ್ಞೆ ಬಂದ ಬಳಿಕವಷ್ಟೇ ಘಟನೆಗೆ ಕಾರಣ ಏನು ಎಂಬುದನ್ನು ತಿಳಿಯಬೇಕಿದೆ. ಸದ್ಯ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.
ವೈಶಾಲಿಯಲ್ಲಿ ತಾಯಿ ಮತ್ತು ಇಬ್ಬರು ಪುತ್ರಿಯರ ಕೊಲೆ: ಬುಧವಾರ ಬೆಳಗ್ಗೆ ಲಾಲಬಾಬು ಸಿಂಗ್ ಅವರ ಪತ್ನಿ ಆಶಾದೇವಿ, ಹಿರಿಯ ಮಗಳು ಕಾಶಿಶ್ ಮತ್ತು ಕಿರಿಯ ಮಗಳು ನಂದಿನಿ ಅವರ ಮೃತದೇಹಗಳು ಮನೆಯ ಹಾಲ್‌ನಲ್ಲಿ ಹಾಸಿಗೆಯ ಮೇಲೆ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿದ್ದವು ಎಂದು ಹೇಳಲಾಗುತ್ತಿದೆ. ಲಾಲಬಾಬು ಸಿಂಗ್ ಹಾಸಿಗೆಯ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದರು. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಎಸ್‌ಡಿಪಿಒ ಓಂಪ್ರಕಾಶ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ, ಮೂರೂ ಶವಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದರು.
ಹತ್ಯೆಗೆ ಬಳಸಿದ್ದ ಹರಿತವಾದ ಆಯುಧ ಪತ್ತೆಯಾಗಿದೆ ಎಂದು ಸದರ್​ ಎಸ್‌ಡಿಪಿಒ ತಿಳಿಸಿದ್ದಾರೆ. ಲಾಲಬಾಬು ಸಿಂಗ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದು, ಮಾದಕ ವ್ಯಸನಿಯಾಗಿದ್ದ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಕೊಂದಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸದ್ಯ ಲಾಲಬಾಬು ಪೊಲೀಸ್ ಕಸ್ಟಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಜ್ಞೆ ಬಂದ ನಂತರವೇ ಘಟನೆಗೆ ಕಾರಣಗಳನ್ನು ಬಹಿರಂಗಪಡಿಸಬಹುದು. ಆದರೆ, ಮೂಲಗಳನ್ನು ನಂಬುವುದಾದರೆ, ಕೊಲೆಯ ಹಿಂದೆ ಕೌಟುಂಬಿಕ ಕಲಹ ಇರಬಹುದು ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!