ಉದಯವಾಹಿನಿ ಕೆ.ಆರ್.ಪೇಟೆ: ಬರಪೀಡಿತವಾಗಿರುವ ಶೀಳನೆರೆ ಹಾಗೂ ಬೂಕನಕೆರೆ ಹೋಬಳಿಗಳ ಕೆರೆಕಟ್ಟೆಗಳನ್ನು ತುಂಬಿಸಲು ನಿರ್ಮಿಸಲಾಗುತ್ತಿರುವ ಏತ ನೀರಾವರಿ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದ್ದು ಕಾಮಗಾರಿಯನ್ನು ವೇಗವಾಗಿ ಮಾಡಿ ಮುಗಿಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಶಾಸಕ ಹೆಚ್.ಟಿ.ಮಂಜು ಸೂಚನೆ ನೀಡಿದರು.ಅವರು ತಾಲೂಕಿನ ಕಟ್ಟಹಳ್ಳಿ ಬಳಿ ನಿರ್ಮಾಣ ಹಂತದಲ್ಲಿರುವ ಬೂಕನಕೆರೆ-ಶೀಳನೆರೆ ಹೋಬಳಿಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಸುಮಾರು ೨೬೫ ಕೋಟಿ ವೆಚ್ಚದ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.ತಾಲ್ಲೂಕಿನಾದ್ಯಂತ ಮಳೆಯ ಕೊರತೆಯಿದ್ದು ರೈತ ಸಂಕುಲ ಸಂಕಷ್ಟದಲ್ಲಿದೆ ಆದ್ದರಿಂದ ಏತ ನೀರಾವರಿ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಿ ಈ ಬಾರಿ ನಮ್ಮ ಜಿಲ್ಲೆಯಲ್ಲಿ ಮಳೆಯ ಕೊರತೆ ಎದುರಾಗಿದೆ. ಹೇಮಾವತಿ ಜಲಾಶಯದಲ್ಲಿಯೂ ನೀರಿನ ಕೊರತೆ ಇರುವುದರಿಂದ ಕಾಲುವೆಗಳಿಗೆ ನೀರು ಬಿಟ್ಟಿಲ್ಲ, ಕೇವಲ ಕೆರೆಕಟ್ಟೆಗಳನ್ನು ತುಂಬಿಸಲು ಹೇಮಾವತಿ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದೆ. ಇದರಿಂದಾಗಿ ರೈತರು ಭತ್ತ, ಕಬ್ಬು, ರಾಗಿ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಯಲು ತೊಂದರೆಯಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಶೀಘ್ರವಾಗಿ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕು. ನಿಗಧಿತ ಅವಧಿಯೊಳಗೆ ಕಾಮಗಾರಿಯನ್ನು ಮುಗಿಸದಿದ್ದಲ್ಲಿ ಸರ್ಕಾರಕ್ಕೂ ತೊಂದರೆ ಹಾಗೂ ಸಾರ್ವಜನಿಕರಿಗೂ ತೊಂದರೆಯಾಗಲಿದೆ ಎಂದು ಸ್ಥಳದಲ್ಲಿದ್ದ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿದರು.ಇದೇ ವೇಳೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ರಾಜ್ಯ ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿನಾಗೇಶ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಜೆಡಿಎಸ್ ಮುಖಂಡ ಹುಲ್ಲೇಗೌಡ, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
