
ಉದಯವಾಹಿನಿ,ಚಿಂತಾಮಣಿ:ತಾಲೂಕಿನ ಕಸಬಾ ಹೋಬಳಿ ದೊಡ್ಡಬೊಮ್ಮನಹಳ್ಳಿ ಗ್ರಾಮದಲ್ಲಿರುವ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸುಮಾರು 65 ವಿದ್ಯಾರ್ಥಿಗಳು ಇದ್ದು.ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು ಬರುವ ಕಿಟ್ ಕೊಡದೆ ಸರಿಯಾದ ರೀತಿಯಲ್ಲಿ ವಾರ್ಡನ್ ನಿರ್ವಹಣೆ ಮಾಡುತ್ತಿಲ್ಲ ಎಂದು ಹಾಸ್ಟೆಲ್ ನ ವಿದ್ಯಾರ್ಥಿಗಳು ವಾರ್ಡನ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಡೆಂಗ್ಯೂ,ಮಕ್ಕಳಲ್ಲಿ ಅಲರ್ಜಿ ಪ್ರಕರಣಗಳು ಹಾಸ್ಟೆಲ್ ನಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಸಹಿತ ಅಗತ್ಯ ಕ್ರಮಗಳನ್ನು ಸಂಬಂಧಪಟ್ಟ ಅಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ಪೋಷಕರು ದೂರಿದರು. ಸಮಸ್ಯೆಗಳ ಕುರಿತು ಹಾಸ್ಟೆಲ್ ವಾರ್ಡನ್ ಗೆ ಮಕ್ಕಳು ಪ್ರಶ್ನಿಸಿದರೆ ಸರಿಯಾದ ರೀತಿಯಲ್ಲಿ ಉತ್ತರ ನೀಡದೆ ಹಾಸ್ಟೆಲ್ ನಿಂದ ತೆಗೆದುಹಾಕುತ್ತೇವೆ ಎಂದು ಧಮ್ಕಿ ಹಾಕುತ್ತಾರೆ ಎಂದು ವಿದ್ಯಾರ್ಥಿಗಳು ಹೇಳಿದರು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಂದ ಬರುವ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಲು ರಾಜ್ಯ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸಲ್ಪಡುವ ಹಲವಾರು ಉಚಿತ ವಸತಿ ನಿಲಯಗಳನ್ನು ನಡೆಸುತ್ತಿದೆ. ಆದಾಗ್ಯೂ, ಈ ಹಾಸ್ಟೆಲ್‌ಗಳಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ರಾಜ್ಯ ಸರ್ಕಾರದ ದೂರದೃಷ್ಟಿಯು ನನಸಾಗದಿರುವುದು ಬೇಸರದ ಸಂಗತಿಯಾಗಿದೆ. ವಿದ್ಯಾರ್ಥಿಗಳಿಗೆ ಅಲರ್ಜಿ ಕಾಯಿಲೆ: ಹಾಸ್ಟೆಲ್ ನಲ್ಲಿ ವಾಸವಾಗಿರುವ ಹಲವು ವಿದ್ಯಾರ್ಥಿಗಳಿಗೆ ಅಲರ್ಜಿ ಇದ್ದು ವಾರ್ಡನ್ ಗೆ ಚಿಕಿತ್ಸೆ ಕೊಡಿಸುವಂತೆ ಹಲವು ಬಾರಿ ಹೇಳಿದರೆ ತಲೆ ಕೆಡಿಸಿಕೊಳ್ಳುತ್ತಿಲ್ಲ ದಿನೇ ದಿನೇ ಮಕ್ಕಳಲ್ಲಿ ಅಲರ್ಜಿ ಕಾಯಿಲೆ ಹರಡುತ್ತಿದೆ. ಈಗಲಾದರೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಅನುಕೂಲ ಮಾಡಿಕೊಡಬೇಕೆಂದು ಪೋಷಕರು ಮನವಿ ಮಾಡಿಕೊಂಡಿದ್ದಾರೆ.
