
ಉದಯವಾಹಿನಿ,ಕೊಪ್ಪಳ :ಈ ಬಾರಿ ಮಳೆಯ ಅಭಾವದಿಂದ ದೇಶದ ರೈತರು ಕಂಗಾಲುವಾಗಿದ್ದು, ಈಗಾಗಲೇ ಕೇಂದ್ರ ಸರ್ಕಾರ ಎನ್..ಡಿ.ಆರ್.ಎಫ್ ಮುಖಾಂತರ ಬೆಳೆನಾಶವಾದ ರೈತರಿಗೆ ಸಹಾಯ ಧನ ನೀಡಲು ಮುಂದಾಗಿದೆ. ಆದರೆ ರಾಜ್ಯ ಸರ್ಕಾರ ರೈತರ ಬಗೆಗೆ ನಿಷ್ಕಾಳಜಿಯನ್ನು ತೋರಿಸುತ್ತಿರುವದು ದುರಂತವೇ ಸರಿ ಎಂದು ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ವಾಗ್ಧಾಳಿ ಮಾಡಿದರು. ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅತಿವೃಷ್ಠಿ, ಅನಾವೃಷ್ಠಿ ಮತ್ತು ತೀವ್ರ ಬರಗಾಲ ಆವರಿಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಬೆಳೆ ಸಮೀಕ್ಷೆಯ ನೆಪ ನೀಡುತ್ತಾ ಕಾಲಹರಣ ಮಾಡುತ್ತಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿ ‘ದಿವಾಳಿ’ ಆಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಜೋಡಿಸುವುದರಲ್ಲಿ ಮಗ್ನವಾಗಿದೆ. ಇದರಿಂದ ಯಾವುದೇ ಇನ್ನಿತರ ಯೋಜನೆಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ವಿಫಲವಾಗಿದೆ. ಸಮೀಕ್ಷೆಯ ಸಬೂಬು ಬಿಟ್ಟು ನೊಂದ ರೈತರ ಬೆಳೆಗಳಿಗೆ ಶೀಘ್ರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಇದೇ ತಿಂಗಳ ಭಾರತೀಯ ಜನತಾ ಪಕ್ಷವು ರಾಜ್ಯ ಸರ್ಕಾರದ ಧೋರಣೆಗಳ ವಿರುದ್ಧ ರಾಜ್ಯವ್ಯಾಪಿ ಏಕಕಾಲಕ್ಕೆ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಾಧ್ಯಮ ವಕ್ತಾರ ಮಹೇಶ ಹಾದಿಮನಿ ಸೇರಿದಂತೆ ಇತರರು ಹಾಜರಿದ್ದರು.
” ಮಾಜಿ ಸಚಿವರ ಹೇಳಿಕೆಗೆ ಟಾಂಗ್ “: ಯಲಬುರ್ಗಾ ಶಾಸಕ ಹಾಗೂ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ರೈತರಿಗೆ ತ್ವರಿತವಾಗಿ ಬೇಕಿರುವ ನೂತನ ಟ್ರಾನ್ಸ್ ಫಾರಂಗಳ ಬೇಡಿಕೆಗೆ ಸರ್ಕಾರಕ್ಕೆ ಪತ್ರ ಬರೆದಿರುವ ಸುದ್ದಿ ಮಾಧ್ಯಮದಲ್ಲಿ ಹರಿದಾಡುತ್ತಿರುವ ಕುರಿತು ಸಂಸದ ಸಂಗಣ್ಣ ಕರಡಿ ಪ್ರತಿಕ್ರಿಯಿಸಿ ಮಾತನಾಡಿ, ಓರ್ವ ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ತಮ್ಮದೇ ಸರ್ಕಾರ ಆಡಳಿತದಲ್ಲಿರುವಾಗ ಇಂತಹ ಮುಜುಗರ ತರುವ ಪತ್ರಗಳು ಅಗತ್ಯವೇ..? ರಾಯರಡ್ಡಿ ಅವರ ಮೊಬೆಲ್ ಕರೆಯನ್ನು ಅಧಿಕಾರಿಗಳು ಸ್ವೀಕರಿಸುತ್ತಿಲ್ಲವೆಂದರೆ ಇದರ ಅರ್ಥವೇನು ಎಂದು ಲೇವಡಿ ಮಾಡುತ್ತಲೇ ಟಾಂಗ್ ನೀಡಿದರು.
