
ಉದಯವಾಹಿನಿ,ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು ಹೋಬಳಿ ಕೇಂದ್ರದಲ್ಲಿ ಗ್ರಾಮ ಪಂಚಾಯತಿಯು ತ್ಯಾಜ್ಯ ವಿಲೇವಾರಿಯನ್ನು ಸರಿಯಾಗಿ ಮಾಡದೇ ಬೇಜವಬ್ದಾರಿ ತೋರುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.ಕಸದ ರಾಶಿಯು ಗ್ರಾಮ ಪಂಚಾಯತಿ ಕಚೇರಿಯ ಸಮೀಪದ ರಸ್ತೆ ಬದಿ, ಗ್ರಾಮಕ್ಕೆ ಅಂಟಿಕೊಂಡಿರುವ ಕೆರೆಗೆ ಸೇರಿದಂತೆ ಎಲ್ಲಂದರಲ್ಲೆ ಬಿಸಾಡಲಾಗುತ್ತಿದೆ. ಸರಿಯಾಗಿ ನಿರ್ವಹಣೆ ಇಲ್ಲದೆ ಸ್ವಚ್ಛ ಭಾರತ್ ಅಭಿಯಾನಯನ್ನು ಹೆಸರಿಗಷ್ಟೇ ಸೀಮಿತ ಎನ್ನುವಂತಾಗಿದೆ. ಗುರುವಾರ ಬೆಳಗ್ಗೆ ಗೂಳೂರು ಮುಖ್ಯ ರಸ್ತೆ ಬದಿಯಲ್ಲಿ ಹಾಲಿನ ಡೈರಿಯ ಮುಂಭಾಗದಲ್ಲಿ ಕಸದ ರಾಶಿಯನ್ನುಯನ್ನು ಸುರಿಯಲಾಗಿದೆ. ಅದಕ್ಕೆ ಬೆಂಕಿ ಅಂಟಿಸಿ, ಮತ್ತಷ್ಟು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಕಸ ವಿಲೇವಾರಿಯ ಬಗ್ಗೆ ಪ್ರತಿ ಗ್ರಾಮ ಪಂಚಾಯತಿಗೂ ತನ್ನದೇ ಆದ ಸೂಚನೆ ಮತ್ತು ಮಾರ್ಗಸೂಚಿಗಳಿರುತ್ತವೆ. ಒಣ ಕಸ,ಹಸಿ ಕಸ ಬೇರ್ಪಡಿಸುವಿಕೆ ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ತ್ಯಾಜ್ಯ ನಿರ್ವಹಣೆ ಮಾಡಬೇಕಿದೆ.ಅದರ ಜೊತೆಗೆ ಇತ್ತೀಚೆಗೆ ಪ್ರತಿ ಮನೆಗೊಂದರಂತೆ ಕಸದ ಬುಟ್ಟಿಗಳ ವಿತರಣೆಯನ್ನೂ ಮಾಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕಸವನ್ನು ಸುಡಲಾಗುತ್ತಿದೆ. ಇನ್ನೂ ಗ್ರಾಮ ಪಂಚಾಯತಿಗಳ ತ್ಯಾಜ್ಯ ನಿರ್ವಹಣೆಗೆಂದು ತ್ಯಾಜ್ಯ ನಿರ್ವಹಣಾ ಘಟಕಗಳನ್ನೂ ನಿರ್ಮಿಸಲಾಗಿದೆ. ಇಂತಹ ಯಾವುದನ್ನೂ ಪಾಲಿಸಲಾಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ.ತ್ಯಾಜ್ಯಕ್ಕೆ ಬೆಂಕಿ ಇಡುವಂತಿಲ್ಲ,ಕೂಡಲೇ ಸಮರ್ಪಕವಾಗಿ ತ್ಯಾಜ್ಯವನ್ನು ನಿರ್ವಹಣೆ ಮಾಡುವಂತೆ ಹಾಗೂ ಕಸ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಪಿಡಿಓರವರಿಗೆ ಸೂಚಿಸಲಾಗುವುದು-ಜಿ.ವಿ ರಮೇಶ್,ಕಾರ್ಯನಿರ್ವಹಣಾಧಿಕಾರಿ,ತಾಲ್ಲೂಕು ಪಂಚಾಯತಿ,ಬಾಗೇಪಲ್ಲಿ
