
ಉದಯವಾಹಿನಿ ದೇವರಹಿಪ್ಪರಗಿ: ವ್ಯಾಪಾರದಿಂದ ಸಂಗ್ರಹವಾಗುವ ಘನತ್ಯಾಜ್ಯವನ್ನು ಹಸಿ ಕಸ ಹಾಗೂ ಒಣ ಕಸ ಬೇರ್ಪಡಿಸಿ ಸಂಗ್ರಹಿಸಲು ಪ್ರತಿ ಬೀದಿ ಬದಿ ವ್ಯಾಪಾರಸ್ಥರಿಗೆ ಬಕೆಟ್‌ಗಳನ್ನು ವಿತರಿಸುವ ಪ್ರಾಯೋಗಿಕ ಯೋಜನೆಗೆ ಪ ಪಂ ಮುಖ್ಯಾಧಿಕಾರಿ ಎಲ್.ಡಿ. ಮುಲ್ಲಾ ಚಾಲನೆ ನೀಡಿದರು.ಪಟ್ಟಣದ ಮೊಹರೆ ವೃತ್ತದಿಂದ ಬಸ್ ನಿಲ್ದಾಣದ ಎದುರುಗಡೆ ಇರುವ ಬೀದಿ ಬದಿ ವ್ಯಾಪಾರಸ್ಥರಿಗೆ ಶನಿವಾರದಂದು ಬಕೆಟ್ ವಿತರಣೆ ಮಾಡಿ ಮಾತನಾಡಿದ ಅವರು.ಕೊಳೆಯುವ ಮತ್ತು ಕೊಳೆಯದ ಎರಡು ಬಗೆಯ ತ್ಯಾಜ್ಯಗಳಲ್ಲಿ ಕೊಳೆಯುವ ಹಸಿ ತ್ಯಾಜ್ಯದಿಂದ ಗೊಬ್ಬರ, ಬಯೋಗ್ಯಾಸ್, ವಿದ್ಯುತ್ ತಯಾರಿಸಬಹು ದಾಗಿದ್ದು, ಕೊಳೆಯದ ಪದಾರ್ಥಗಳನ್ನು ಪುನರ್ಬಳಕೆ ಮಾಡುವ ನಿಟ್ಟಿನಲ್ಲಿ ರೂಪಿಸಲಾಗುತ್ತದೆ. ಇವೆಲ್ಲದರ ಮೊದಲ ಹಂತವಾಗಿ ಬಕೆಟ್‌ಗಳನ್ನು ವ್ಯಾಪಾರಸ್ಥರಿಗೆ ನೀಡಿ ಕಸವನ್ನು ಬೇರ್ಪಡಿಸುವ ಕಾರ್ಯ ಶುರು ಮಾಡಲಾಗಿದೆ ಪಟ್ಟಣದ ಸ್ವಚ್ಛತೆಗೆ ಎಲ್ಲರೂ ಆದ್ಯತೆ ನೀಡಬೇಕು ಹಾಗೂ ಪ ಪಂ ಸಿಬ್ಬಂದಿ ಜೊತೆ ಸಹಕರಿಸಿ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಪ ಪಂ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ ಮಾತನಾಡಿ ಪ್ರತಿಯೊಬ್ಬ ವ್ಯಾಪಾರಸ್ಥರಿಗೆ ಕೆಂಪು ಹಾಗೂ ಹಸಿರು ಬಣ್ಣದ ಬಕೆಟ್‌ಗಳನ್ನು ನೀಡುತ್ತಿದ್ದು, ಹಸಿರು ಬಣ್ಣದ ಬಕೆಟ್‌ನಲ್ಲಿ ಹಸಿ ಕಸ, ಕೆಂಪು ಬಣ್ಣದ ಬಕೆಟ್‌ನಲ್ಲಿ ಒಣ ಕಸ ಹಾಕಬೇಕು ಎಂದರು.ಇದೇ ಸಂದರ್ಭದಲ್ಲಿ ವ್ಯಾಪಾರಸ್ಥರಾದ ಮಹಮ್ಮದ ರಫೀಕ ಪತ್ತೆಮೊಹಮ್ಮದ, ಸುನಿಲ ಕೊಟಿನ್,ಮಹಾದೇವ ಮಣೂರ,ಗೈಬುದ್ದಿನ ಕೊಲ್ಹಾಪುರ,ರಾಜಹ್ಮದ ವಾಲಿಕಾರ,ಪ್ರಕಾಶ ರಾಜರಾಮ ಸೇರಿದಂತೆ ಪ ಪಂ ಸಿಬ್ಬಂದಿ ವರ್ಗ ಹಾಗೂ ಬೀದಿ ಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.
