ಉದಯವಾಹಿನಿ, ಕೊಡಗು: ಜಿಲ್ಲೆಒಂದು ವಿಶಿಷ್ಟ ಸಂಸ್ಕೃತಿ ಆಚಾರ ವಿಚಾರಗಳಿಂದ ಗಮನ ಸೆಳೆಯುತ್ತದೆ. ಇಲ್ಲಿ ನಡೆಯುವ ಆಚರಣೆಗಳು ಬೇರೆ ಎಲ್ಲ ಜಿಲ್ಲೆಗಳಿಗಿಂತ ಡಿಫರೆಂಟ್. ಇಲ್ಲಿನ ಹಬ್ಬಗಳ ಆಚರಣೆಗಳು ಕೂಡ ವಿಶೇಷ ಹಾಗೂ ವಿಭಿನ್ನವಾಗಿ ನಡೆಯುತ್ತದೆ. ಇದೀಗ ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಕೈಲ್ ಮುಹೂರ್ತ ಹಬ್ಬದ ಸಂಭ್ರಮ ಪ್ರತಿಮನೆಯಲ್ಲೂ ಕಳೆಕಟ್ಟಿದೆ.ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಡಗದಾಳುವಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಕೊಡವ ನ್ಯಾಷನ್ ಕೌನ್ಸಿಲ್ನ ವತಿಯಿಂದ ಕೈಲ್ ಮುಹೂರ್ತ ಅದ್ದೂರಿಯಾಗಿ ನಡೆಯಿತು. ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು, ಪುರುಷರು, ಆಯುಧಗಳನ್ನ ಮರದ ಕೆಳಗಿಟ್ಟು ವಿಶೇಷ ಪೂಜೆ ಸಲ್ಲಿಸಿದರು. ಕೈಯಲ್ಲಿ ಕೋವಿ ಹಿಡಿದಿರೋ ಪುರುಷರು, ಮಹಿಳೆಯರು, ಕೊಡವ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುತ್ತ ಸಂಭ್ರಮಿಸಿದರು.ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಕೈಲ್ ಮುಹೂರ್ತವೂ ಒಂದು. ಸೆಪ್ಟೆಂಬರ್ ತಿಂಗಳು ಬಂತು ಅಂದ್ರೆ ಸಾಕು ಕೊಡಗು ಜಿಲ್ಲೆಯ ಮನೆ ಮನೆಗಳಲ್ಲಿ ಪಂದಿಕರಿ, ಕಡುಬು ಘಮಘಮಿಸುತ್ತದೆ. ಏಕೆಂದರೆ ಅದು ಕೈಲ್ ಮುಹೂರ್ತ ಹಬ್ಬದ ಸ್ಪೆಷಲ್. ಕೊಡಗಿನ ಆಯುಧ ಪೂಜೆ ಎಂದೇ ಕರೆಯಲ್ಪಡುವ ಈ ‘ಕೈಲ್ ಮುಹೂರ್ತ’ ಹಬ್ಬವನ್ನ ಜಿಲ್ಲೆಯಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತೆ. ಕೊಡಗಿನಲ್ಲಿ ಸಂಪ್ರದಾಯಗಳೊಂದಿಗೆ ಮನೋರಂಜನಾ ಹಬ್ಬವಾಗಿಯೂ ಇದನ್ನ ಆಚರಿಸುವುದು ವಾಡಿಕೆ. ಕೃಷಿಗೆ ಪ್ರಧಾನ ಆದ್ಯತೆ ನೀಡಿರುವ ಕೊಡಗು ಜಿಲ್ಲೆಯಲ್ಲಿ ವ್ಯವಸಾಯಕ್ಕೆ ಬಳಕೆಯಾದ ಉಪಕರಣಗಳಿಗೆ ಪೂಜೆ ಸಲ್ಲಿಸಿ, ಈ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.ಇನ್ನು ಇಲ್ಲಿ ಹಿರಿಯರು, ಮಕ್ಕಳು, ಮಹಿಳೆಯರು, ಪುರುಷರು ಎಲ್ಲರೂ ಕೈಯಲ್ಲಿ ಗನ್ ಹಿಡಿದುಕೊಂಡು ಹಬ್ಬದ ಆಚರಣೆಗೆ ಬರ್ತಾರೆ. ಆದರೆ ಇವರ್ಯಾರು ಹೊಡೆದಾಡಿಕೊಳ್ಳುವುದಕ್ಕೆ ಗನ್ ಹಿಡಿದಿಲ್ಲ, ಬದಲಾಗಿ ರಕ್ಷಣೆಗೆ ಬಳಸೋ ಶಸ್ತ್ರಾಸ್ತ್ರಗಳನ್ನ ಇಟ್ಕೊಂಡು ತಮ್ಮ ಶೌರ್ಯವನ್ನ ಪ್ರದರ್ಶಿಸ್ತಾರೆ. ಯಾಕಂದ್ರೆ ಕೊಡಗಿನ ಪ್ರಸಿದ್ಧ ಆಚರಣೆಗಳಲ್ಲೊಂದಾದ ಕೈಲ್ ಪೋಳ್ದ್ ಅಥವಾ ಕೈಲ್ ಮುಹೂರ್ತ್ ಹಬ್ಬದ ಸ್ಪೆಷಲ್ ಇದು.
ಸೆಪ್ಟೆಂಬರ್‌ನಲ್ಲಿ ಆಚರಿಸುವ ಈ ಕೈಲ್ ಮೂಹರ್ತ ಹಬ್ಬದ ನಿಮಿತ್ತ ಕೊಡಗಿನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆದು ಸಂಭ್ರಮಿಸುತ್ತಾರೆ. ಮಹಿಳೆಯರು, ಪುರುಷರು ಒಟ್ಟಿಗೆ ಸೇರಿ ಮರಕ್ಕೆ ತೆಂಗಿನ ಕಾಯಿಗೆ ಗುಂಡು ಹೊಡೆಯುತ್ತಾರೆ. ಅಲ್ಲದೆ ಕೊಡವ ಸಾಂಪ್ರದಾಯಿಕ ನೃತ್ಯ ಮಾಡುತ್ತ ಕೈಯಲ್ಲಿ ಬಂದೂಕು, ಕತ್ತಿ, ಗುರಾಣಿಗಳನ್ನು ಹಿಡಿದು ನೃತ್ಯ ಮಾಡುವ ಮೂಲಕ ಕೈಲ್ ಪೋಲ್ದ್ ಹಬ್ಬದಲ್ಲಿ ಖುಷಿ ಪಡುತ್ತಾರೆ.
