ಉದಯವಾಹಿನಿ, ತಿರುಪತಿ : ಇಂದು ಬೆಳಗ್ಗೆ ಜವಾನ್‌ನ ಚಿತ್ರ ಬಿಡುಗಡೆಗೂ ಮುನ್ನ ಶಾರುಖ್ ಪ್ರಪ್ರಥಮ ಬಾರಿಗೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟೇಶ್ವರ ಸ್ವಾಮಿಗೆ ಇಂದು ವಿಶೇಷ ಪೂಜೆ ಸಲ್ಲಿಸಿದರು.
ಇಂದು ಬೆಳಗ್ಗೆ ನಡೆದ ಸುಪ್ರಭಾತ ಸೇವೆಯಲ್ಲಿ ಶಾರುಖ್ ಅವರ ಪುತ್ರಿ ಸುಹಾನಾ ಖಾನ್, ಜವಾನ್ ಸಹನಟಿ ನಯನತಾರಾ ಮತ್ತು ಅವರ ಪತಿ ವಿಘ್ನೇಶ್ ಶಿವನ್, ಜವಾನ್ ನಿರ್ದೇಶಕ ಅಟ್ಲಿ ಮತ್ತು ಇತರರು ದೇವರಿಗೆ ಪೂಜೆ ಸಲ್ಲಿಸಿದರು. ಇದು ಶಾರುಖ್ ಅವರ ಮೊದಲ ತಿರುಮಲ ಭೇಟಿಯಾಗಿದೆ.
ಮೊದಲಿಗೆ ದೇವಸ್ತಾನದ ಅಧಿಕಾರಿಗಳು ಶಾರುಖ್ ಅವರನ್ನು ಸ್ವಾಗತಿಸಿ ದರ್ಶನಕ್ಕೆ ವ್ಯವಸ್ಥೆ ಮಾಡಿದರು. ಬಳಿಕ ಶಾರುಖ್ ಗರ್ಭಗುಡಿಯಲ್ಲಿರುವ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದರು.
ಬಳಿಕ ರಂಗನಾಯಕುಲ ಮಂಟಪದಲ್ಲಿ ಶಾರುಖ್ ಅವರಿಗೆ ಪಂಡಿತರು ವೇದಾಶೀರ್ವಾದ ನೀಡಿ ಸ್ವಾಮಿಯ ತೀರ್ಥಪ್ರಸಾದ ವಿತರಿಸಿದರು. ಶಾರುಖ್ ಅಭಿನಯದ ‘ಜವಾನ್’ ಸಿನಿಮಾ ಇದೇ ತಿಂಗಳ ೭ರಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರು ತಿರುಮಲಕ್ಕೆ ಬಂದಿದ್ದರು.
ಹಿಂದಿ ಚಲನಚಿತ್ರ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಆಕ್ಷನ್ ಥ್ರಿಲ್ಲರ್, ಜವಾನ್, ಅಭೂತಪೂರ್ವ ಪ್ರಚಾರ ಮತ್ತು ನಿರೀಕ್ಷೆಗಳ ನಡುವೆ ಸೆಪ್ಟೆಂಬರ್ ೭ ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಮುಂಗಡ ಬುಕಿಂಗ್‌ನಲ್ಲಿನ ಇತ್ತೀಚಿನ ಟ್ರೆಂಡ್‌ಗಳನ್ನು ಅನುಸರಿಸಿ, ಜವಾನ್ ೬೫ ಕೋಟಿ ರೂಪಾಯಿಗಳಷ್ಟು ಭಾರತೀಯ ನಿವ್ವಳವನ್ನು ಸಂಗ್ರಹಿಸಲು ಸಿದ್ಧವಾಗಿದೆ ಮತ್ತು ಪಠಾನ್ (ರೂ. ೫೭ ಕೋಟಿ ನಿವ್ವಳ) ಮೂಲಕ ತನ್ನ ಹಿಂದಿನ ಅತ್ಯುತ್ತಮ ಮೊತ್ತವನ್ನು ಭಾರಿ ಅಂತರದಿಂದ ಮೀರಿಸಿದೆ. ಜವಾನ್ ಭಾರತದಾದ್ಯಂತ ೩ ಪ್ರಮುಖ ಮಲ್ಟಿಪ್ಲೆಕ್ಸ್ ಸರಪಳಿಗಳಲ್ಲಿ ಇದುವರೆಗೆ ೩ ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ.

Leave a Reply

Your email address will not be published. Required fields are marked *

error: Content is protected !!