ಉದಯವಾಹಿನಿ ದೇವದುರ್ಗ: ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳುವ ಮೂಲಕ ಮೂಲ ವಿಜ್ಞಾನದ ಕಡೆ ಆಸಕ್ತಿವಹಿಸಿ ಸಾಧನೆ ಮಾಡಬೇಕು ಎಂದು ವಿಜ್ಞಾನ ವಿಷಯ ವೇದಿಕೆ ಅಧ್ಯಕ್ಷ ಶ್ರೀನಿವಾಸ ತಳವಾರ ಹೇಳಿದರು. ಅರಕೇರಾ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶಿಕ್ಷಣ ಇಲಾಖೆಯಿಂದ ಪ್ರೌಢ ಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ನಾಟಕ ಸ್ಪರ್ಧೆ ಕಾರ್ಯಕ್ರಮವನ್ನು ಉದ್ದೇಶಿಸಿ ಬುಧವಾರ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ಅಗ್ರಗಣ್ಯ ಸ್ಥಾನ ಹೊಂದಿದೆ. ವಿಜ್ಷಾನಿಗಳು ಚಂದ್ರ ಮತ್ತು ಸೂರ್ಯನ ಅಧ್ಯಯನ ಮಾಡುತ್ತಿದ್ದಾರೆ. ಇದು ಭಾರತ ವೈಜ್ಞಾನಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಧನೆಯನ್ನು ಬಿಂಬಿಸುತ್ತದೆ. ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಕಾರ್ಯಸಾಧನೆಗೆ ರೂಪುಗೊಳ್ಳಬೇಕು. ಮೂಲ ವಿಜ್ಞಾನದ ಕೊರತೆ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಕಾಡುತ್ತಿದೆ. ವಿಜ್ಞಾನ ಚಟುವಟಿಕೆಗಳಲ್ಲಿ ಭಾಗವಹಿವುದಕ್ಕೆ ಶಿಕ್ಷಕರು ಪ್ರೇರೇಪಿಸಬೇಕು. ಇದರಿಂದ ಉದ್ಯೋಗಾವಕಾಶಗಳಿಗೆ ಸಹಕಾರಿಯಾಗಲಿದೆ ಎಂದರು. ಆಲ್ಕೋಡ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಗವಿಸಿದ್ಧಪ್ಪ ಸುಂಕದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲಾ ಹಂತದಿಂದಲೂ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ, ಅನ್ವೇಷಣೆ ಪ್ರವೃತ್ತಿ, ರಾಷ್ಟ್ರೀಯ ಏಕತಾ ಮನೋಭಾ ಬೆಳೆಸಿಕೊಳ್ಳಬೇಕು. ಮೂಡನಂಬಿಕೆ ಕಂದಾಚಾರದಿಂದ ದೂರವಿರಬೇಕು. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ. ಸೋತರೂ ಗೆದ್ದರೂ ಕಲಿಯುವ ಮನಸ್ಥಿತಿ ಕಡಿಮೆಯಾಗಬಾರದು ಎಂದರು. ಇದೇ ಸಂದರ್ಭದಲ್ಲಿ ಬಿಆರ್‍ಪಿ ಶಿವಕುಮಾರ ನಾಡಗೌಡ, ಗಣಿತ ವಿಷಯ ವೇದಿಕೆ ಅಧ್ಯಕ್ಷ ಬಿಂದುಕುಮಾರ, ಮುಖ್ಯ ಶಿಕ್ಷಕರಾದ ಕುಮಾರಸ್ವಾಮಿ ಹಿರೇಮಠ, ಎ.ವಿ ಬಸವರಾಜ ಇದ್ದರು. ಶಿಕ್ಷಕ ಚನ್ನಮಲ್ಲಪ್ಪ ಇದ್ದರು.
