
ಉದಯವಾಹಿನಿ, ಔರಾದ್ : ಕೋರ್ಟ್ ತೀರ್ಪಿನ ಬಳಿಕ ತಾಲೂಕಿನ ನಾಗಮಾರಪಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಕುರ್ಚಿ ನಾಗಮಾರಪಳ್ಳಿ ಬೆಂಬಲಿತ ಸದಸ್ಯರ ಪಾಲಾಗಿದೆ. ಇದರಿಂದ ಬಿಜೆಪಿ ಕಾಂಗ್ರೆಸ್ ಮುಖಂಡರ ಲೆಕ್ಕಾಚಾರ ತಪ್ಪಿದೆ. ಅಧ್ಯಕ್ಷ ಮೀಸಲಾತಿಯಿಂದ ತಳುಕು ಹಾಕಿಕೊಂಡಿದ್ದ ಈ ಗ್ರಾಪಂ ಚುನಾವಣೆ ಇಡೀ ತಾಲೂಕಿನಲ್ಲಿಯೇ ಎಲ್ಲರ ಗಮನಸೆಳೆದಿತ್ತು. ಕರಂಜಿ (ಬಿ) ಗ್ರಾಮದ ಸದಸ್ಯ ರಾಮರಡ್ಡಿ ಬಸರಡ್ಡಿ ಅವರ ವಿರುದ್ಧ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ ಸಂಗಾರಡ್ಡಿ ಶಿವಾರಡ್ಡಿ ತೋಂಟ ಒಂದು ಮತ ಹೆಚ್ಚು ಪಡೆದು ಅಧ್ಯಕ್ಷರಾದರು. ಇದರಿಂದ ರಾಮರಡ್ಡಿಗೆ ಸೋಲುಂಟಾಯಿತು. ಇನ್ನೂ ಉಪಾಧ್ಯಕ್ಷ ಚುನಾವಣೆಗೆ ನಾಗಮಾರಪಳ್ಳಿ ಗ್ರಾಮದ ಸದಸ್ಯೆ ಮಹಾದೇವಿ ದಿವನ ವಿರುದ್ಧ ಸ್ಪರ್ಧಿಸಿದ ರಾಯಪಳ್ಳಿ ಗ್ರಾಮದ ಸದಸ್ಯೆ ಪದ್ಮಾವತಿ ಬಾಬುಗೊಂಡ ಅವರು 3 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಒಟ್ಟು 21 ಸದಸ್ಯರ ಬಲಹೊಂದಿರುವ ಗ್ರಾಪಂ, ಉಮಾಕಾಂತ ನಾಗಮಾರಪಳ್ಳಿ ಬೆಂಬಲಿಗರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.ಅನೇಕ ಅಡೆತಡೆಗಳನ್ನು ಎದುರಿಸಿದ ಇವರು ಗ್ರಾಪಂಗೆ ಅಧ್ಯಕ್ಷ- ಉಪಾಧ್ಯಕ್ಷೆಯಾಗಿ ಅಧಿಕಾರ ನಡೆಸುವ ಅದೃಷ್ಟವಂತರಾಗಿದ್ದಾರೆ. ಇನ್ನೂ ಚುನಾವಣೆಯಲ್ಲಿ ಕಾಂಗ್ರೆಸ್ – ಬಿಜೆಪಿ ಸ್ವ ಪಕ್ಷ ಬಿಟ್ಟು ಉಮಾಕಾಂತ ನಾಗಮಾರಪಳ್ಳಿ ಬೆಂಬಲಿಗರಿಗೆ ಬೆಂಬಲಿಸಿ ನಾಗಮಾರಪಳ್ಳಿ ಗ್ರಾಪಂ ಅಧ್ಯಕ್ಷ ಆಯ್ಕೆ ಮಾಡಿರುವುದು ತಾಲೂಕಿನೆಲ್ಲೆಡೆ ಚರ್ಚೆ ನಡೆಯುತ್ತಿದೆ.ಅಧ್ಯಕ್ಷ ಮೀಸಲಾತಿ ವಿರೋಧಿಸಿ ಗ್ರಾಪಂ ಸದಸ್ಯ ಅಹಿಲ್ಯಬಾಯಿ ಎನ್ನುವರು ಹೈಕೋರ್ಟ್ ಮೊರೆ ಹೋಗಿದ್ದರು. ಕೇಸ್ ಇತ್ಯರ್ಥವಾದ ಮೇಲೆ ಅಗಸ್ಟ್ 1ರಂದು ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಆದರೆ ಕೋರ್ಟ್ ಫಲಿತಾಂಶ ಘೋಷಣೆ ತಡೆಹಿಡಿದಿತ್ತು. ಕಳೆದ ಅಗಸ್ಟ್ 17ರಂದು ಕೋರ್ಟ್ ಚುನಾವಣೆ ಫಲಿತಾಂಶ ಪ್ರಕಟಿಸುವಂತೆ ತೀರ್ಪು ನೀಡಿದರಿಂದ ಸೆ. 7ರಂದು ಗುರುವಾರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಚುನಾವಣಾಧಿಕಾರಿಯಾದ, ಲೋಕೋಪಯೋಗಿ ಇಲಾಖೆಯ ಎಇಇ ವೀರಶೆಟ್ಟಿ ರಾಠೋಡ ಫಲಿತಾಂಶ ಘೋಷಿಸಿದರು. ಪಿಡಿಒ ನಾಗೇಶ ಮುಕ್ರಂಬೆ ಸಾಥ್ ನೀಡಿದರು.ಅಧ್ಯಕ್ಷ-ಉಪಾಧ್ಯಕ್ಷ ಘೋಷಣೆ ಮಾಡುತ್ತಿದ್ದಂತೆ ಗ್ರಾಮದ ಕಾರ್ಯಕರ್ತರು, ಬೆಂಬಲಿಗರು, ಮುಖಂಡರು ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷ ಸಂಗಾರಡ್ಡಿ ಶಿವಾರಡ್ಡಿ, ಉಪಾಧ್ಯಕ್ಷೆ ಪದ್ಮಾವತಿ ಬಾಬುಗೊಂಡ ಅವರಿಗೆ ಶುಭಕೋರಿದರು. ಪ್ರಮುಖರಾದ ಬಸವರಾಜ ಹೆಬ್ಬಾಳೆ, ಸಂಗಪ್ಪ ಘಾಟೆ, ಉಮಾಕಾಂತ ಬಂಡೆ, ಶಿವರಾಜ ಪಾಟೀಲ್, ಸತೀಶ ಪಾಟೀಲ್, ಶಿವು ಪಾಟೀಲ್, ಗುರುನಾಥ ಪಾಟೀಲ್, ಸಂಜು ದೊಡತಲೆ, ಬಾಬು, ಸಿಮನ್, ನಾಗರಾಜ್ ಕೋಣಕೆರೆ, ನಾಗರಾಜ ದೇಗಲವಾಡೆ ಸೇರಿದಂತೆ ಅನೇಕರಿದ್ದರು. ಎಲ್ಲ ಗ್ರಾಪಂ ಸದಸ್ಯರ ಸಹಕಾರದೊಂದಿಗೆ ಗ್ರಾಪಂ ಅಧ್ಯಕ್ಷನಾಗಿದ್ದು ಅಭಿವೃದ್ಧಿಗೆ ಶ್ರಮಿಸುವೆ. ಪಕ್ಷ ಭೇದ ಮರೆತು ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಮಾದರಿ ಗ್ರಾಪಂ ಮಾಡುವ ಸಂಕಲ್ಪ ನಮ್ಮದಾಗಿದೆ.
-ಸಂಗಾರಡ್ಡಿ ಶಿವಾರಡ್ಡಿ ತೋಂಟ, ನೂತನ ಗ್ರಾಪಂ ಅಧ್ಯಕ್ಷ.
