ಉದಯವಾಹಿನಿ ಕೆ.ಆರ್.ಪೇಟೆ:ತಾಲೂಕಿನ ಹೊಸಹೊಳಲು ಗ್ರಾಮದ ಚಿಕ್ಕಕೆರೆಯ ಒಡಲಿನಲ್ಲಿ ಅರ್ಧ ಎಕರೆ ಜಾಗವನ್ನೇ ಖಾಸಗಿ ವ್ಯಕ್ತಿಯೊಬ್ಬರಿಗೆ ಸರ್ವೇ ಸೂಪರ್‌ವೈಸರ್ ದುರಸ್ಥಿ ಮಾಡಿ ಕೆರೆಯ ಅಂಗಳಕ್ಕೆ ಕಲ್ಲುನೆಟ್ಟು ಗಡಿಯನ್ನು ಗುರುತಿಸಿ ಕೊಟ್ಟ ಕ್ರಮವನ್ನು ಹೊಸಹೊಳಲು ನಾಗರೀಕರು ತೀವ್ರವಾಗಿ ಖಂಡಿಸಿದ್ದು ಕೆರೆಯ ಅಂಗಳಕ್ಕೆ ತಂತಿ ಬೇಲಿಹಾಕಲು ಬಂದ ವ್ಯಕ್ತಿಗಳಿಗೆ ಛೀಮಾರಿ ಹಾಕಿ ವಾಪಸ್ ಕಳಿಸಿದ ಘಟನೆ ನಡೆದಿದೆ. ಪುರಸಭಾ ವ್ಯಾಪ್ತಿಯ ೨೮.೮ಎಕರೆ ವಿಸ್ತೀರ್ಣದಲ್ಲಿರುವ ಹೊಸಹೊಳಲು ಚಿಕ್ಕಕೆರೆಯನ್ನು ೮.೫ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ ಕಳೆದ ಎರಡು ತಿಂಗಳ ಹಿಂದೆ ಹೊಸಹೊಳಲು ಗ್ರಾಮದ ಪ್ರಸನ್ನಮೂರ್ತಿ ಎಂಬ ವ್ಯಕ್ತಿಯೊಬ್ಬರು ಕೆರೆಯ ಅಂಗಳವೂ ಸೇರಿದಂತೆ ಎರಡೂವರೆ ಎಕೆರೆ ಕೃಷಿ ಭೂಮಿಯನ್ನು ದುರಸ್ಥಿ ಮಾಡಿಸಿಕೊಂಡಿದ್ದು ಏಕಾಏಕಿ ಕಲ್ಲಿನ ಕಂಬಗಳನ್ನು ನೆಟ್ಟಿ ತಂತಿ ಬೇಲಿಯನ್ನು ಅಳವಡಿಸಲು ಆಗಮಿಸಿದ್ದಾರೆ. ಕೆರೆ ಅಂಗಳಕ್ಕೆ ಕಲ್ಲಿನ ಕಂಬಗಳನ್ನು ನೆಡುತ್ತಿರುವುದಕ್ಕೆ ತೀವ್ರ ಪ್ರತಿರೋಧ ಒಡ್ಡಿದ ಪುರಸಭೆಯ ಮಾಜಿಅಧ್ಯಕ್ಷ ಹೆಚ್.ವಿ.ಕೃಷ್ಣೇಗೌಡ, ಹಾಗೂ ಗ್ರಾಮದ ಮುಖಂಡ ಯೋಗೇಶ್ ಕೆರೆಯ ಅಂಗಳದೊಳಕ್ಕೆ ಓಡಾಡಲು ನೂತನವಾಗಿ ನಿರ್ಮಿಸಿರುವ ರಸ್ತೆಗೆ ಅಡ್ಡಲಾಗಿ ತಂತಿಬೇಲಿಯನ್ನು ಹಾಕುತ್ತಿದ್ದವರನ್ನು ತಡೆದಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಕೆರೆ ಹಾಗೂ ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿಪಡಿಸಿ ಕೆರೆಯ ಅಂಗಳಕ್ಕೆ ಬೇಲಿ ಹಾಕಿಕೊಳ್ಳುತ್ತಿರುವ ಕ್ರಮವು ಸಂವಿಧಾನಭಾಹಿರ ಕೃತ್ಯವಾಗಿದೆ ಎಂದು ಖಂಡಿಸಿ ಪೋಲಿಸ್ ಇನ್ಸ್ಪೆಕ್ಟರ್ ಎಂ.ಕೆ.ದೀಪಕ್ ಅವರಿಗೆ ದೂರು ನೀಡಿ ಕಾಮಗಾರಿಯನ್ನು ತಡೆ ಹಿಡಿದರಲ್ಲದೆ ಮತ್ತೊಮ್ಮೆ ಕೆರೆಯ ಅಂಗಳವನ್ನು ಅಳತೆ ಮಾಡಿಸಬೇಕು. ಕೆರೆಯ ಅಂಗಳದ ಸರ್ಕಾರಿ ಭೂಮಿಯನ್ನು ಹೊರತುಪಡಿಸಿ ಖಾಸಗಿ ಭೂಮಿಯನ್ನು ಗುರುತಿಸಿ ಆ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಕೊಡಿಸಬೇಕು. ಕೆರೆಯ ಭೂಮಿಯನ್ನು ಕೆರೆಯ ಅಂಗಳದAತೆಯೇ ಜೋಪಾನ ಮಾಡಬೇಕು ಎಂಬ ಗ್ರಾಮಸ್ಥರ ಒತ್ತಾಯಕ್ಕೆ ಸಮ್ಮತಿ ಸೂಚಿಸಿದ ಪೋಲಿಸ್ ಇನ್ಸ್ಪೆಕ್ಟರ್ ತಂತಿಬೇಲಿ ಹಾಕುವ ಕಾರ್ಯವನ್ನು ನಿಲ್ಲಿಸಿ ವಾಪಸ್ ಕಳಿಸಿಕೊಟ್ಟರು. ಕೆರೆಯಂಗಳ ದುರಸ್ಥಿ ಮಾಡಿಕೊಟ್ಟ ಸರ್ವೇಯರ್ ವಿರುದ್ಧ ಕಾನೂನುಕ್ರಮಕ್ಕೆ ಆಗ್ರಹ: ಕೆರೆಯ ಅಂಗಳವನ್ನು ದುರಸ್ಥಿ ಮಾಡಿಸಿಕೊಂಡು ಸರ್ಕಾರಿ ಜಾಗವನ್ನೇ ತಮ್ಮ ಸ್ವಂತ ಆಸ್ತಿಯನ್ನಾಗಿ ಮಾಡಿಕೊಂಡಿರುವ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಲಂಚದ ಹಣಪಡೆದು ಕೇವಲ ಎರಡು ತಿಂಗಳ ಅವಧಿಯಲ್ಲಿ ದುರಸ್ಥಿ ಮಾಡಿ ಖಾತೆಯಾಗಲು ಸಹಕಾರ ನೀಡಿರುವ ಸರ್ವೇ ಸೂಪರ್‌ವೈಸರ್ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಮಾನ್ಯ ಜಿಲ್ಲಾಧಿಕಾರಿಗಳು ಕೆರೆಯ ಅಂಗಳವನ್ನೇ ದುರಸ್ಥಿ ಮಾಡಿಕೊಟ್ಟಿರುವ ಸರ್ವೇಯರ್ ಹಾಗೂ ಸರ್ವೇ ಸೂಪರ್‌ವೈಸರ್ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಂಡು ಶಿಕ್ಷೆಗೆ ಒಳಪಡಿಸಬೇಕು ಎಂದು ಹೊಸಹೊಳಲು ಗ್ರಾಮದ ಮುಖಂಡ ಯೋಗೇಶ್ ಆಗ್ರಹಿಸಿದ್ದಾರೆ.
