ಉದಯವಾಹಿನಿ, ನ್ಯೂಯಾರ್ಕ್ : ಉತ್ತರ ಕೊರಿಯಾಗೆ ಸಂಬಂಧಿಸಿದಂತೆ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಉಕ್ರೇನ್ ವಿರುದ್ಧದ ಯುದ್ದದಲ್ಲಿ ಉತ್ತರ ಕೊರಿಯಾ ಒಂದು ವೇಳೆ ರಷ್ಯಾಗೆ ಶಸ್ತ್ರಾಸ್ತ್ರ ಸರಬರಾಜು ಮಾಡಿದರೆ ಅದೊಂದು ದೊಡ್ಡ ಪ್ರಮಾದವಾಗಲಿದೆ ಎಂದು ಕಮಲಾ ತಿಳಿಸಿದ್ದಾರೆ.
ಸದ್ಯದಲ್ಲೇ ರಷ್ಯಾ ಮತ್ತು ಉತ್ತರ ಕೊರಿಯಾ ನಡುವಿನ ಶಸ್ತ್ರಾಸ್ತ್ರ ಮಾತುಕತೆಗಳು ಸಕ್ರಿಯವಾಗಿ ಮುಂದುವರೆದಿದೆ ಎಂದು ಅಮೆರಿಕಾದ ಅಧಿಕಾರಿಗಳು ಇತ್ತೀಚಿನ ದಿನಗಳಲ್ಲಿ ಎಚ್ಚರಿಕೆ ನೀಡಿದ್ದರು. ಉತ್ತರ ಕೊರಿಯಾದ ಕಿಮ್ ಜೊಂಗ್ ಉನ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುವ ಬಗ್ಗೆ ಚರ್ಚಿಸಲು ಈ ತಿಂಗಳು ರಷ್ಯಾಕ್ಕೆ ಪ್ರಯಾಣಿಸಲು ಯೋಜಿಸಿದ್ದಾರೆ ಎಂದು ವರದಿ ಮಾಡಿತ್ತು. ಇನ್ನು ಇಂಡೋನೇಶ್ಯಾದಲ್ಲಿ ನಡೆದ ಆಸಿಯಾನ್ ಸಮಾವೇಶದಲ್ಲಿ ಭಾಗವಹಿಸಿದ್ದ ವೇಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಮಲಾ, ಇದು ದೊಡ್ಡ ತಪ್ಪು ಎಂದು ನಾನು ಭಾವಿಸುತ್ತೇನೆ. ಆ ನಿಟ್ಟಿನಲ್ಲಿ ಅವರು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಾರೆ ಎಂಬ ಕಲ್ಪನೆಯು ಕೂಡ ಒಂದು ದೊಡ್ಡ ತಪ್ಪು. ಈ ನಿರ್ಧಾರದಿಂದ ರಷ್ಯಾ ಮತ್ತು ಉತ್ತರ ಕೊರಿಯಾ ಎರಡೂ ದೇಶಗಳನ್ನು ಮತ್ತಷ್ಟು ಪ್ರತ್ಯೇಕಿಸಲಿದೆ ಎಂದು ನಾನು ಬಲವಾಗಿ ನಂಬುತ್ತೇನೆ ಎಂದು ತಿಳಿಸಿದ್ದಾರೆ.
