
ಉದಯವಾಹಿನಿ ಬೆಂಗಳೂರು: ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ 8 ವಿಷಯಗಳ ಕುರಿತು ಸಿದ್ದಪಡಿಸಿರುವ ವರದಿಗಳನ್ನು ಕೂಡಲೇ ಸಲ್ಲಿಸಲು ಬ್ರ್ಯಾಂಡ್ ಬೆಂಗಳೂರು ಸಮಾವೇಶ (Conclave) ಸಮಿತಿಯ ಅಧ್ಯಕ್ಷರು ಹಾಗೂ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ಅವರು ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬ್ರ್ಯಾಂಡ್ ಬೆಂಗಳೂರಿನ ಸಮಾವೇಶವನ್ನು ನಡೆಸುವ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಯೋಜನೆಯ ಅನುಷ್ಠಾನಕ್ಕಾಗಿ ಈಗಾಗಲೇ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಸರ್ವಪಕ್ಷಗಳ ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಲಾಗಿದೆ. ಅಲ್ಲದೆ ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ನಾಗರಿಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ನಿವಾಸಿ ಕ್ಷೇಮಾಭಿವೃದ್ಧಿ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸಲಹೆ/ಅಭಿಪ್ರಾಯಗಳನ್ನು ಪಡೆಯಲಾಗಿದೆ. ಇದಲ್ಲದೆ ಸಾರ್ವಜನಿಕರಿಂದಲೂ ಸಹಾ ವೆಬ್ ಪೋರ್ಟಲ್ ಮೂಲಕ ಬೆಂಗಳೂರಿನ ಅಭಿವೃದ್ಧಿಗಾಗಿ 7 ವಿಷಯಗಳಾದ “ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು” ಕುರಿತು 70 ಸಾವಿರಕ್ಕೂ ಹೆಚ್ಚು ಅಭಿಪ್ರಾಯ/ಅನಿಸಿಕೆ/ಸಲಹೆಗಳು ಸ್ವೀಕರಿಸಲಾಗಿದೆ. ಬೆಂಗಳೂರನ್ನು ಜ್ಞಾನದ ನಗರವನ್ನಾಗಿಸುವ ನಿಟ್ಟಿನಲ್ಲಿ “ಶೈಕ್ಷಣಿಕ ಬೆಂಗಳೂರು” ವಿಷಯದ ಬಗ್ಗೆ ಕೂಡಾ ಶಿಕ್ಷಣ ತಜ್ಞರ ಸಲಹೆ ಪಡೆಯಲಾಗಿದೆ. ಒಟ್ಟಾರೆ 8 ಪ್ರಮುಖ ವಿಷಯಗಳ ಕುರಿತು ಸಿದ್ದಪಡಿಸಿರುವ ವರದಿಗಳನ್ನು ಸಂಬಂಧಿಸಿದ ಶೈಕ್ಷಣಿಕ ಪಾಲುದಾರ ಸಂಸ್ಥೆಗಳು ಕೂಡಲೇ ಸಲ್ಲಿಸಲು ಸೂಚನೆ ನೀಡಲಾಯಿತು. ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯ 8 ವಿಷಯಗಳ ಕುರಿತಾಗಿ ಸಿದ್ದಪಡಿಸಿರುವ ವರದಿಗಳ ಆಧಾರದ ಮೇಲೆ 8 ಪ್ರತ್ಯೇಕ ಪ್ರ್ಯಾತ್ಯಕ್ಷಿಕೆಗಳನ್ನು ಸಿದ್ದಪಡಿಸಿಕೊಳ್ಳಬೇಕು ಹಾಗೂ ಸಾರ್ವಜನಿಕರಿಂದ ಸ್ವೀಕೃತಿಗೊಂಡಿರುವ ಅಭಿಪ್ರಾಯಗಳ ಬಗ್ಗೆ ಹಾಗೂ ತಜ್ಞರೊಂದಿಗೆ ವಿಚಾರ ವಿನಿಮಯ ನಡೆಸುವ ಬಗ್ಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಮಾವೇಶವನ್ನು ಏರ್ಪಡಿಸುವ ಸಂಬಂಧ ಅಗತ್ಯವಿರುವ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರಿಗೆ ಸೂಚನೆ ನೀಡಲಾಯಿತು. ಬ್ರ್ಯಾಂಡ್ ಬೆಂಗಳೂರು ಕಲ್ಪನೆಯ ಬಗ್ಗೆ 8 ಸಮಿತಿಗಳು ಸಿದ್ದಪಡಿಸುತ್ತಿರುವ ವರದಿಗಳ ಆಧಾರದ ಮೇಲೆ ಮುಂದಿನ ಕಾರ್ಯಯೋಜನೆಯನ್ನು ಸೂಚಿಸುವಂತೆ ಹಾಗೂ ಅಗತ್ಯ ಆಡಳಿತಾತ್ಮಕ ಸಿದ್ದತೆಗಳ ಬಗ್ಗೆ ಸಲಹೆ ನೀಡುವಂತೆಯೂ ಸೂಚಿಸಲಾಯಿತು. ಸಭೆಯಲ್ಲಿ ಬ್ರ್ಯಾಂಡ್ ಬೆಂಗಳೂರು ಸಮಾವೇಶ ಸಮಿತಿಯ ಸದಸ್ಯರಾದ ಡಾ. ತ್ರಿಲೋಕ್ ಚಂದ್ರ, ಡಾ. ಹರೀಶ್ ಕುಮಾರ್, 8 ವಿಷಯಗಳ ನೋಡಲ್ ಅಧಿಕಾರಿಗಳು, ಸಮನ್ವಯಾಧಿಕಾರಿಗಳು ಮತ್ತು ಶೈಕ್ಷಣಿಕ ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
