
ಉದಯವಾಹಿನಿ ಇಂಡಿ : ಭಾರತದ ಇಸ್ರೋ ಮಾಡಿರುವ ಸಾಧನೆ ಇಡೀ ಜಗತ್ತೇ ಮೆಚ್ಚಿ ಕೊಂಡಾಡುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು. ಅವರು ಬುಧವಾರ ಇಂಡಿ ಪಟ್ಟಣದ ಆರ್.ಎಂ.ಶಹಾ ಸಂಸ್ಥೆಯ ಪಬ್ಲಿಕ್ ಶಾಲೆಯ ದಶಮಾನೋತ್ಸವ ಮತ್ತು ಇಸ್ರೋ ವಿಜ್ಞಾನಿ ಸಂಜೀವ ಗೌರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂಡಿ ತಾಲ್ಲೂಕಿನ ದೇಶಪಾಂಡೆ ತಾಂಡಾ ಮತ್ತು ತಾಂಬಾ ಗ್ರಾಮದ ಇಬ್ಬರು ವಿಜ್ಞಾನಿಗಳು ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಗಳಾಗಿ ಸೇವೆಯಲ್ಲಿರುವದು ನಮ್ಮ ತಾಲ್ಲೂಕಿಗೆ ಹೆಮ್ಮೆಯ ವಿಷಯ ಎಂದ ಅವರು 70 ವರ್ಷಗಳ ಹಿಂದೆ ತಾಲ್ಲೂಕಿನ ಬಂಥನಾಳ ಗ್ರಾಮದ ಸಂಗನಬಸವ ಶ್ರೀಗಳು ತಮ್ಮ ಜೋಳಿಗೆಯ ಮೂಲಕ ಶ್ರಮಿಸಿ ಕಟ್ಟಿದ ಶಿಕ್ಷಣ ಸಂಸ್ಥೆಗಳ ಪ್ರಭಾವದಿಂದ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಪ್ರತೀ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ ಎಂದರು. ಇಂದು ತಾಲ್ಲೂಕಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡ ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ವಿದ್ಯಾರ್ಥಿಗಳು ಅವುಗಳ ಸದುಪಯೋಗ ಮಾಡಿಕೊಂಡು ವಿಜ್ಞಾನಿಗಳು, ವೈಧ್ಯರು, ಇಂಜಿನಿಯರ್ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಅವೆಲ್ಲವುಗಳಲ್ಲಿ ಸಾಕಷ್ಟು ಸ್ಥಾನಮಾನಗಳಿವೆ. ಆದರೆ ಇಂದಿನ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ಬರಬೇಡಿ ಎಂದು ಸಲಹೆ ನೀಡಿದರು. ಜಗತ್ತು ವಿಶಾಲವಾಗಿದೆ. ವಿದ್ಯಾರ್ಥಿಗಳು ಕೇವಲ ತಮ್ಮ ಶಾಲೆಯ ಸಿಲೇಬಸ್ ಗೆ ಸೀಮಿತವಾಗದೇ ಇನ್ನಿತರ ವಿಷಯಗಳ ಬಗ್ಗೆ ಗಮನ ಹರಿಸಬೇಕು. ಸಮಾಜಕ್ಕಾಗಿ ಬದುಕು ಎನ್ನುವ ತತ್ವ ಅಳವಡಿಸಿಕೊಳ್ಳಬೇಕೆಂದರು. ಇಸ್ರೋ ವಿಜ್ಞಾನಿ ಸಂಜೀವ ಚಂದ್ರಶೇಖರ ಗೌರ ಶಹಾ ಶಾಲೆಯಲ್ಲಿ ಹೊಸದಾಗಿ ಅಳವಡಿಸಿದ್ದ ಸುಮಾರು 30 ಲಕ್ಷ ವೆಚ್ಚದ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿ, ಇಸ್ರೋ ಸಾಧನೆ ಮಾಡಿರುವ ಕಾರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು, ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. 1969 ರಲ್ಲಿ ಸ್ಥಾಪನೆಯಾಗಿರುವ ಇಸ್ರೋ 1975 ರಲ್ಲಿ ಮೊದಲ ಬಾರಿಗೆ ಆರ್ಯಭಟ ಹಾರಿಸಿತ್ತು. ಇಂದು ದೇಶದ 13 ಸ್ಥಳಗಳಲ್ಲಿ ಇಸ್ರೋ ಶಾಖೆಗಳನ್ನು ತೆರೆದು ಇಡೀ ವಿಶ್ವವೇ ಬೆರಗುಗೊಳಿಸುವ ಕಾರ್ಯ ಮಾಡುತ್ತಿದೆ ಎಂದರು. ಆರ್.ಎಂ.ಶಹಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್.ಶಹಾ ಅಧ್ಯಕ್ಷತೆ ವಹಿಸಿದ್ದರು. ಆಶಾ ಗೌರ, ವಕೀಲ ಸುನೀಲ ಕುಲಕರ್ಣಿ ವೇದಿಕೆಯಲ್ಲಿದ್ದರು. ಪ್ರಾಚಾರ್ಯ ಪರವೀನ ಜಮಾದಾರ ಸ್ವಾಗತಿಸಿದರು. ಉಪನ್ಯಾಸಕ ಮಲ್ಲಿಕಾರ್ಜುನ ಪಾಟೀಲ ವಂದಿಸಿದರು
