ಉದಯವಾಹಿನಿ ದೇವರಹಿಪ್ಪರಗಿ: ಕ್ರೀಡೆಗೆ ವಯಸ್ಸಿನ ತಾರತಮ್ಯ ಬೇಡ. ಕ್ರೀಡೆ ನಮ್ಮನ್ನು ಸದಾ ಚಟುವಟಿಕೆಯಿಂದ ಇಡುವ ಜತೆಗೆ ಕ್ರಿಯಾಶೀಲರನ್ನಾಗಿಡುತ್ತದೆ. ಪ್ರತಿಯೊಬ್ಬರೂ ಒತ್ತಡದ ಬದುಕು ನಡೆಸುತ್ತಿರುವುದರಿಂದ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಆದಕಾರಣ ದೈಹಿಕ, ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.ಪಟ್ಟಣದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲೆಯಲ್ಲಿ ಶುಕ್ರವಾರದಂದು ನಡೆದ ಸಿಂದಗಿ, ದೇವರಹಿಪ್ಪರಗಿ ಹಾಗೂ ಆಲಮೇಲ ತಾಲೂಕಾ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟನೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು,ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದ್ದು ಮಕ್ಕಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ, ಪಾಲಕರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಮಕ್ಕಳು ಹೆಚ್ಚು ಹೆಚ್ಚು ಆಟಗಳನ್ನು ಮಾಡಿ ಆರೋಗ್ಯವನ್ನು ವೃದ್ಧಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ತಂದೆ ತಾಯಂದಿರು ತಮ್ಮ ಮಕ್ಕಳ  ಅಂಕಗಳ ಕಡೆಗೆ ಗಮನ ಹರಿಸದೆ ಆಟಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ, ಕ್ರೀಡೆಗಳಿಂದ ದೈಹಿಕ ಮಾನಸಿಕ ಬೆಳವಣಿಗೆ ಆಗುತ್ತದೆ. ವಿದ್ಯಾರ್ಥಿಗಳು ಪಾಠದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಿ ಸೋಲು, ಗೆಲವು ಸಮಾನವಾಗಿ ಸ್ವೀಕರಿಸಿ, ತಾಲೂಕಿನ ಕೀರ್ತಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತಾಗಬೇಕು ಎಂದು ಶುಭ ಹಾರೈಸಿದರು.ಕಾರ್ಯಕ್ರಮದ ದಿವ್ಯ ಸಾನಿಧ್ಯ ಮಲಘಾಣದ ಶ್ರೀ ಜಡೆ ಶಾಂತೇಶ್ವರ ಮಠದ ಷ ಬ್ರ ಜಡೆ ಶಾಂತಲಿಂಗ ಶಿವಾಚಾರ್ಯರು ವಹಿಸಿದ್ದರು. ಪಟ್ಟಣದ ಸದಯ್ಯನ ಮಠದ ಷ ಬ್ರ ಶ್ರೀ ವೀರಗಂಗಾಧರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ ರಾ ಸ ಪ್ರಾ ಶಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಎ.ಎಚ್. ವಾಲಿಕಾರ,ಸ ನೌ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಎಂ.ಜಿ.ಯಂಕಂಚಿ,ಪ್ರೌ ಶಾ ಸ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಎಸ್ ಎಸ್ ಯಾಳವಾರ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಾಲೆಯ ಅಧ್ಯಕ್ಷರಾದ ವ್ಹಿ.ಕೆ.ಪಾಟೀಲ, ಸಾಲಕ್ಕಿ ಪ್ರೌಢಶಾಲೆಯ ಪ್ರಾಚಾರ್ಯ ವ್ಹಿ.ಎಂ.ಪಾಟೀಲ, ಗುರನಗೌಡ ಪಾಟೀಲ, ಪ್ರಕಾಶ್ ಮಲ್ಹಾರಿ, ಸಿದ್ದಲಿಂಗ ಚೌದರಿ, ಎಂ.ಎಂ.ಕೆಂಭಾವಿ ಸೇರಿದಂತೆ ಹಲವಾರು ಮುಖಂಡರು, ಗಣ್ಯರು, ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆ ಮಾಂತೇಶ ಬೀಳಗಿ, ಪ್ರಮಾಣ ವಚನ ಬೋಧನೆ ಕೆ.ಪಿ. ಮಾಲಿಪಾಟೀಲ, ಅಶೋಕ ರಾಠೋಡ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!