
ಉದಯವಾಹಿನಿ ಹಾಸನ : ಸೆ.10ರಂದು ಬೆಂಗಳೂರು ಅರಮನೆ ಮೈದಾನದ ನಲಪಾಡ್ ಪೆವಿಲಿಯನ್ನಲ್ಲಿ ಬೆಳಗ್ಗೆ 10.30 ಗಂಟೆ ಬೃಹತ್ ಜೆಡಿಎಸ್ ಸಮಾವೇಶ ನಡೆಯಲಿದೆ ಎಂದು ಮಾಜಿ ಶಾಸಕ ಕೆ.ಎಸ್ ಲಿಂಗೇಶ್ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷ ಸಂಘಟನೆ ಮಾಡಿ ರಾಜ್ಯದಲ್ಲಿ ಬಲಿಷ್ಠ ಪ್ರಾದೇಶಿಕ ಪಕ್ಷ ಕಟ್ಟುವ ಹಿನ್ನೆಲೆಯಲ್ಲಿ ಸೆ. 10 ರಂದು ಪ್ರಮುಖ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಮುಂಬರುವ ಲೋಕಸಭೆ, ಜಿಲ್ಲಾ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ಹಾಗೂ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಸಮಾವೇಶ ಮಾಡಲಿದ್ದೇವೆ. ಸಮಾವೇಶದಲ್ಲಿ ಮಾಜಿ ಪ್ರಧಾನಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಗಿರುವ ಹೆಚ್.ಡಿ.ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು ಸೇರಿದಂತೆ ಪಕ್ಷದ ಎಲ್ಲಾ ಶಾಸಕರು, ಮಾಜಿ ಶಾಸಕರು, ಹಿರಿಯ ಮುಖಂಡರು, ಸಾವಿರಾರು ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.ತಾಲೂಕಿನ ಅಧ್ಯಕ್ಷರು, ಮಾಜಿ ಶಾಸಕರು ಹಾಲಿ ಶಾಸಕರಿಗೆ ಆಹ್ವನ ನೀಡಲಾಗಿದೆ. ಯಾವುದೇ ವ್ಯವಸ್ಥೆಗಳನ್ನು ಮಾಡಿಲ್ಲ. ಸ್ವಂತ ವಾಹನ ವ್ಯವಸ್ಥೆ ಮಾಡಿಕೊಂಡು ಆಗಮಿಸಬೇಕು. ಸುಮಾರು ಜಿಲ್ಲೆಯಿಂದ ಐದು ಸಾವಿರ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಪಕ್ಷದ ಬೆಳವಣಿಗೆಗೆ ಹೇಗೆಲ್ಲ ಕೆಲಸ ಮಾಡಬೇಕು, ನಮ್ಮ ಮುಂದಿನ ನಡೆ ಏನೆಂದು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಮುಖರ ಸಭೆ ಸಭೆಯಲ್ಲಿ ಮೈತ್ರಿ ವಿಚಾರವಾಗಿ ಚರ್ಚೆ ಆಗಿರುವುದು ನಿಜ. ಅದನ್ನು ಕೋರ್ ಕಮಿಟಿ ತಿರ್ಮಾನಿಸಲಿದೆ. ನಾವು ಕಾಂಗ್ರೆಸ್ ಅನ್ನು ಅವಗಿಂದ ವಿರೋಧ ಮಾಡುತ್ತಲೆ ಬಂದಿದ್ದೇವೆ. ರಾಜ್ಯದ ಒಳಿತಿಗಾಗಿ ವರಿಷ್ಠರು ಏನು ತಿರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧರಾಗಿದ್ದೇವೆ.ಕೋಮುವಾದಿಗಳು ಎಂದು ಆರೋಪಿಸುವ ಜೆಡಿಎಸ್ ಬಿಜೆಪಿ ಜತೆಗೆ ಹೇಗೆ ಮೈತ್ರಿ ಸಾಧ್ಯ ಎಂದು ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲಾರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸಮಾನತೆಯಿಂದ ಕೆಲಸ ಮಾಡಬೇಕಾಗುತ್ತದೆ. ಅಲ್ಪಸಂಖ್ಯಾತರನ್ನು ಕಡೆಗಣನೆ ಮಾಡುವುದಿಲ್ಲ. ಆ ರೀತಿ ಬಿಜೆಪಿ ಮಾಡಿದ್ದೆ ಆದಲ್ಲಿ ನಾವುಗಳು ಆ ಸಮಯದಲ್ಲಿ ಬಿಜೆಪಿಯನ್ನೆ ವಿರೋಧಿಸಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.ರಾಜ್ಯದ ಹಿತಕ್ಕಾಗಿ, ಪಕ್ಷದ ಬೆಳವಣಿಗೆಗೆ ಪಕ್ಷದ ವರಿಷ್ಠರು ಏನು ಕ್ರಮಕೈಗೊಳ್ಳುತಾರೋ ಅದಕ್ಕೆ ನಾವು ಬೆಂಬಲ ಇರುತ್ತದೆ. ಕೋರ್ ಕಮಿಟಿಯಲ್ಲಿ ಎಲ್ಲಾರು ಸಹ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಅವರಲ್ಲಿ ಕೆಲವರು ಕಾಂಗ್ರೆಸ್ ಒಲವು ತೊರಿಸಿದರೆ, ಹೆಚ್ಚಿನವರು ಬಿಜೆಪಿ ಒಲವು ತೋರಿಸಿದರು. ಕಾಂಗ್ರೆಸ್ ದುರಾಡಳಿತ ಸರ್ಕಾರದ ವಿರುದ್ಧ ನಮ್ಮ ಸದ್ಯದ ಹೋರಾಟವಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಪಿ ಸ್ವರೂಪ್, ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಸ್.ದ್ಯಾವೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಸೈಯದ್ ಅಕ್ಬರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಿವನಂಜಪ್ಪ, ಹಾಜರಿದ್ದರು.

