ಉದಯವಾಹಿನಿ, ಅಮರಾವತಿ: ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚಂದ್ರಬಾಬು ನಾಯ್ಡು ಅವರಿಗೆ ಬೆಂಬಲ ಸೂಚಿಸಲು ತೆರಳುತ್ತಿದ್ದ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಮತ್ತು ಪಕ್ಷದ ಹಿರಿಯ ನಾಯಕ ನಾದೆಂಡ್ಲ ಮನೋಹರ್ ಅವರನ್ನು ಎನ್‌ಟಿಆರ್ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆಂಧ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪವನ್ ಕಲ್ಯಾಣ್ ಅವರನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ನಂದ್ಯಾಲದಲ್ಲಿ ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ ಕ್ರಮವನ್ನು ಪವನ್ ಕಲ್ಯಾಣ್ ತೀವ್ರವಾಗಿ ಖಂಡಿಸಿದ್ದರು. ಮಾಜಿ ಮುಖ್ಯಮಂತ್ರಿಯನ್ನು ಬೆಂಬಲಿಸಲು ವಿಜಯವಾಡಕ್ಕೆ ತೆರಳಲು ಪವನ್ ಯತ್ನಿಸಿದ್ದರು.
ನಿನ್ನೆ, ಪವನ್ ಕಲ್ಯಾಣ್ ಅವರು ವಿಜಯವಾಡಕ್ಕೆ ತೆರಳುವ ಉದ್ದೇಶದಿಂದ ಸಿದ್ಧವಾಗಿದ್ದ ವಿಶೇಷ ವಿಮಾನವು ಹೈದರಾಬಾದ್‌ನಿಂದ ಟೇಕ್ ಆಫ್ ಆಗದಂತೆ ನೋಡಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
