ಉದಯವಾಹಿನಿ, ಪಲಮಾಸ್ ಕಾರ್ಡಿಟ್ಸಾ, (ಗ್ರೀಸ್‌): ಪ್ರವಾಹದಿಂದಾಗಿ ಗ್ರೀಸ್‌ನಲ್ಲಿ ಹತ್ತು ಜನರು ಮೃತಪಟ್ಟಿದ್ದು, ನೆರೆಯ ಸಂಕಷ್ಟದಲ್ಲಿ ಸಿಲುಕಿರುವ ನೂರಾರು ಜನರ ರಕ್ಷಣೆಗೆ ಸೇನೆ ನೆರವಿನೊಂದಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಶನಿವಾರ ಕಾರ್ಯಾಚರಣೆ ನಡೆಸಿದ್ದಾರೆ.
ಪ್ರತಿಕೂಲ ಹವಾಮಾನದಲ್ಲೂ 2,850ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕದಳದ ವಕ್ತಾರರು ತಿಳಿಸಿದ್ದಾರೆ.ಕಾರ್ಡಿಟ್ಸಾ, ಪಲಮಾಸ್‌, ತ್ರಿಕಾಲ ಪಟ್ಟಣಗಳಲ್ಲಿ ಸಾಕಷ್ಟು ಜನರು ಪ್ರವಾಹದಲ್ಲಿ ಸಿಲುಕಿದ್ದು, ಆರು ಜನರು ನಾಪತ್ತೆಯಾಗಿದ್ದಾರೆ. ಪಲಮಾಸ್‌ನಲ್ಲಿ ಹಲವು ಮನೆಗಳು ಜಲಾವೃತಗೊಂಡಿವೆ. ಸಿಲು‌ಕಿಕೊಂಡಿರುವ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಹರಸಾಹಸ ಪಡುತ್ತಿದ್ದಾರೆ‌ ಎಂದು ಸುದ್ದಿಸಂಸ್ಥೆ ‌ಪತ್ರಕರ್ತರು ಹೇಳಿದ್ದಾರೆ.
‘ಲಾರಿಸಾ ನಗರದಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ಪಿನಿಯೋಸ್‌ ನದಿ ತುಂಬಿ ಹರಿಯುತ್ತಿದ್ದು, ಇದರಿಂದ ಸಾಕಷ್ಟು ತೊಂದರೆ ಆಗಿದೆ’ ಎಂದು ಅಗ್ನಿಶಾಮಕದಳದ ವಕ್ತಾರ ಯಾನ್ನಿಸ್‌ ಮಾಹಿತಿ ನೀಡಿದ್ದಾರೆ.ಬಂದರು ನಗರಿ ವೋಲೋಸ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಪಂಪಿಂಗ್ ಸ್ಟೇಷನ್‌ ಹಾಗೂ ಪೂರೈಕೆ ವ್ಯವಸ್ಥೆಗೆ ಸಾಕಷ್ಟು ಹಾನಿಯಾಗಿದೆ. ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ.
ದೇಶದ ಎರಡನೇ ಅತಿ ದೊಡ್ಡ ನಗರವಾದ ಥೆಸಲೋನಿಕಿ ಹಾಗೂ ರಾಜಧಾನಿ ಅಥೆನ್ಸ್‌ ಸಂಪರ್ಕಿಸುವ ಹೆದ್ದಾರಿಯ ಹಲವೆಡೆ ಸಂಪರ್ಕ ಕಡಿತಗೊಂಡಿರುವ ಕಾರಣ ವಾಹನ ಸಂಚಾರ ಶನಿವಾರವೂ ಸವಾಲಾಗಿತ್ತು.
‘ಡೇನಿಯಲ್‌’ ಚಂಡಮಾರುತವು ಮಧ್ಯ ಕರಾವಳಿ ಪ್ರದೇಶವಾದ ಮೆಗ್ನಿಷಿಯಾಗೆ ಸೋಮವಾರ ಅಪ್ಪಳಿಸಿದರೆ, ಬುಧವಾರ ಕಾರ್ಡಿಟ್ಸಾ, ತ್ರಿಕಾಲ ಸೇರಿದಂತೆ ಇನ್ನಿತರೆ ಪಟ್ಟಣಗಳಿಗೆ ಬುಧವಾರ ಅಪ್ಪಳಿಸಿದೆ.

Leave a Reply

Your email address will not be published. Required fields are marked *

error: Content is protected !!