
ಉದಯವಾಹಿನಿ,ಚೆನ್ನೈ : ತಮಿಳುನಾಡಿನ ನೀಲಗಿರಿ ಪ್ರದೇಶದಲ್ಲಿ ಎರಡು ಹುಲಿಗಳಿಗೆ ವಿಷಪ್ರಾಶನ ಮಾಡಿ ಸಾಯಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಆರೋಗ್ಯಯುತವಾಗಿದ್ದ ಹುಲಿಗಳು ಅಚಾನಕ್ಕಾಗಿ ಸಾವನ್ನಪ್ಪಿದ್ದ ಬಗ್ಗೆ ಶಂಕಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸಾವಿನ ಕಾರಣವನ್ನು ತನಿಖೆ ನಡೆಸಲು ನಿರ್ಧರಿಸಿ ಹುಲಿಗಳ ಅಂಗಾಂಗಗಳ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಳಿಕ ಕಾಡಿನ ಪ್ರಾಣಿಗಳಿಗೆ ವಿಷ ಹಾಕಲಾಗಿದೆ ಎಂದು ತಿಳಿದು ಬಂದಿತ್ತು.
ಕಳೆದೊಂದು ತಿಂಗಳಿನಿಂದ ನೀಲಗಿರಿ ಪ್ರದೇಶದಲ್ಲಿ 6 ಹುಲಿಗಳು ಸಾವಿಗೀಡಾಗಿವೆ. ಇದು ಅಧಿಕಾರಿಗಳಲ್ಲಿ ಆತಂಕ ಮೂಡಿಸಿತ್ತು. ದಿಢೀರ್ ಆಗಿ ಹುಲಿಗಳು ಪ್ರಾಣ ಕಳೆದುಕೊಳ್ಳುತ್ತಿರುವುದಕ್ಕೆ ಕಾರಣ ಏನೆಂಬುದನ್ನು ತಿಳಿಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದರು. ಆದರೆ, ಕಾರಣ ಮಾತ್ರ ತಿಳಿದು ಬಂದಿರಲಿಲ್ಲ. ತನಿಖೆಯ ವೇಳೆ ಕಾಡಿನಲ್ಲಿ ಹಸುವಿನ ಮೃತದೇಹವನ್ನು ಪತ್ತೆ ಮಾಡಲಾಗಿತ್ತು. ಇದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿತ್ತು.
ಸೇಕರ್ ಎಂಬಾತ ತನ್ನ ಹಸು ಕಾಣೆಯಾಗಿದೆ ಎಂದು ಕೆಲ ದಿನಗಳ ಹಿಂದೆ ಮಾಹಿತಿ ನೀಡಿದ್ದ. ಹಸು ಕಾಣೆಯಾದ ದಿನ ಮತ್ತು ಅದರ ಮಾಲೀಕ ನೀಡಿದ ದೂರಿನ ಬಗ್ಗೆ ಅನುಮಾನಿಸಿದ ಅಧಿಕಾರಿಗಳು ಇನ್ನಷ್ಟು ಜಾಲಾಡಿದಾಗ ಪ್ರಕರಣದ ತಿರುವು ಪಡೆದುಕೊಂಡಿದೆ.
