
ಉದಯವಾಹಿನಿ ಕುಶಾಲನಗರ: ಮಡಿಕೇರಿಯ ಬೀಬಿ ಫಾತಿಮಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೈಸೂರು ಅಲ್-ಅನ್ಸಾರ್ ಆಸ್ಪತ್ರೆ, ಮಂಗಳೂರು ಯೇನಪೋಯ ಆಸ್ಪತ್ರೆ, ವಿರಾಜಪೇಟೆ ಕೊಡಗು ದಂತ ವೈದ್ಯ ಮಹಾವಿದ್ಯಾಲಯ ಮತ್ತು ವಿವಿಧ ಆಸ್ಪತ್ರೆಗಳ ಮತ್ತು ತಜ್ಞ ವೈದ್ಯರುಗಳ ಸಹಯೋಗದಲ್ಲಿ ಆರೋಗ್ಯ, ದಂತ, ನೇತ್ರ ತಪಾಸಣಾ ಮತ್ತು ರಕ್ತದಾನ ಶಿಬಿರ ಕುಶಾಲನಗರದ ಇಂದಿರಾ ಬಡಾವಣೆ ಹಿಲಾಲ್ ಮದರಸ ಹಾಲ್‍ನಲ್ಲಿ ಇಂದು(12)ರಂದು ನಡೆಯಿತು. ಬೀಬಿ ಫಾತಿಮಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅಪ್ರೋಜ್ ಮಹಮ್ಮದ್ ಖಾನ್ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಕೂಡ ತಮ್ಮ ದೈನಂದಿನ ಜೀವನ ಚಟುವಟಿಕೆ, ಜಂಜಾಟಗಳ ಒತ್ತಡ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆಧುನಿಕ ಜೀವನಶೈಲಿ, ಪ್ರಾಕೃತಿಕ ಅಸಮತೋಲನದಿಂದ ಅನಾರೋಗ್ಯಗಳು ಉಂಟಾಗುತ್ತಿವೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕಿದೆ. ಆರೋಗ್ಯ ತಪಾಸಣೆಗೆಂದೇ ಉಳಿತಾಯದ ಒಂದು ಭಾಗ ಮೀಸಲಿಡಬೇಕಿದೆ ಎಂದ ಅವರು, ಇಂತಹ ಉಚಿತ ತಪಾಸಣೆಗಳ ಪ್ರಯೋಜನ ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದರು. ವೈದ್ಯ ಸಮೂಹದ ಬಗ್ಗೆ ಎಲ್ಲರೂ ಗೌರವ ಹೊಂದುವ ಅಗತ್ಯವಿದೆ. ವೈದ್ಯರುಗಳು ಕೂಡ ನಿಸ್ವಾರ್ಥ ಸೇವೆಗೆ ಪ್ರಾಮುಖ್ಯತೆ ನೀಡಬೇಕಿದೆ ಎಂದರು.
ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಎಂ.ಸತೀಶ್ ಮಾತನಾಡಿದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಶಿಬಿರದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ತಜ್ಞ ವೈದ್ಯರುಗಳಾದ ಡಾ.ಅಯಾಜ್, ಡಾ.ಆಯೇಷ, ಡಾ.ಚೇತನ್, ರಕ್ತನಿಧಿ ಘಟಕದ ಡಾ.ಕರುಂಬಯ್ಯ, ಪುರಸಭೆ ಸದಸ್ಯ ಖಲೀಮುಲ್ಲಾ, ಪ್ರಮುಖರಾದ ಎಂ.ಇ.ಮಹಮ್ಮದ್, ಅಲೀಂ ಮತ್ತಿತರರು ಇದ್ದರು. ಶಿಬಿರದಲ್ಲಿ 500 ಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣೆಗೆ ಒಳಗಾದರು.
