ಉದಯವಾಹಿನಿ, ಜೈಪುರ, : ಬೆಳ್ಳಂ ಬೆಳಗ್ಗೆ ರಾಜಸ್ಥಾನದ ಭರತಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಮತ್ತು ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಕನಿಷ್ಠ ೧೧ ಜನರು ಬಲಿಯಾಗಿದ್ದು, ೧೨ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬಸ್ ರಾಜಸ್ಥಾನದ ಪುಷ್ಕರ್ನಿಂದ ಉತ್ತರ ಪ್ರದೇಶದ ವೃಂದಾವನಕ್ಕೆ ತೆರಳುತ್ತಿದ್ದಾಗ ಮುಂಜಾನೆ ೪.೩೦ ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಖನ್‌ಪುರ್ ಪ್ರದೇಶದ ಅಂತ್ರ ಫ್ಲೈಓವರಿನಲ್ಲಿ ಸಾಗುತ್ತಿದ್ದಾಗ ಬಸ್ಸಿನ ಇಂಧನ ಖಾಲಿಯಾಗಿತ್ತಲ್ಲದೆ ತಾಂತ್ರಿಕ ಸಮಸ್ಯೆಯೂ ಕಾಡಿತ್ತು. ಬಸ್ಸು ದುರಸ್ತಿಗೊಳ್ಳುತ್ತಿದ್ದಾಗ ಬಸ್ ಚಾಲಕ ಮತ್ತು ಇತರ ಪ್ರಯಾಣಿಕರು ಬಸ್ಸಿನಿಂದ ಇಳಿದು ಅದರ ಹಿಂಬದಿಯಲ್ಲಿ ನಿಂತಿದ್ದಾಗ ವೇಗದಿಂದ ಬಂದ್ ಟ್ರಕ್ ಢಿಕ್ಕಿ ಹೊಡೆದಿತ್ತು.
ಈ ರಭಸಕ್ಕೆ ಐದು ಮಂದಿ ಪುರುಷರು ಮತ್ತು ಆರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ವ್ಯಕ್ತಪಡಿಸಿದ್ದಾರೆ.
