ಉದಯವಾಹಿನಿ  ಶ್ರೀನಿವಾಸಪುರ :- ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಮಾಂಸದ ವ್ಯಾಪಾರಿ ಯೊಬ್ಬ ತನ್ನ ವಿಚ್ಛೇದಿತ ಪತ್ನಿ ಹಾಗೂ ಆಕೆಯ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.ರಾಧಾ (32) ಮತ್ತು ಆಕೆಯ ತಂದೆ ಮುನಿಯಪ್ಪ (60) ಕೊಲೆಯಾದವರು. ಶ್ರೀನಿವಾಸಪುರದ ಮಾಂಸದ ವ್ಯಾಪಾರಿ ನಾಗೇಶ (40) ಕೊಲೆ ಆರೋಪಿ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಶ್ರೀನಿವಾಸಪುರದಿಂದ ನಂಬಿಹಳ್ಳಿಗೆ ಬಂದ ನಾಗೇಶ, ಅಂಗಡಿಯಲ್ಲಿ ಕುಳಿತಿದ್ದ ಮೊದಲ ಪತ್ನಿ ರಾಧಾ ಮತ್ತು ಮಾವನ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ರಾಧಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುನಿಯಪ್ಪ ಶ್ರೀನಿವಾಸಪುರ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಹಲ್ಲೆ ತಡೆಯಲು ಬಂದ ರಾಧಾ ಅಣ್ಣನ ಹೆಂಡತಿ ಅನುಷಾ (26) ಅಣ್ಣನ ಮಗ ವರುಣ್‌ (16) ಗಾಯಗೊಂಡಿದ್ದಾರೆ. ಮೊದಲ ಪತ್ನಿ ರಾಧಾಗೆ ವಿಚ್ಛೇದನ ನೀಡಿದ್ದ ನಾಗೇಶ, ನ್ಯಾಯಾಲಯದ ಆದೇಶದಂತೆ ಆಕೆಗೆ ಜೀವನಾಂಶ ನೀಡುತ್ತಿದ್ದ. ಎರಡನೇ ಪತ್ನಿಯೊಂದಿಗೆ ಶ್ರೀನಿವಾಸಪುರದಲ್ಲಿ ವಾಸವಾಗಿದ್ದ. ಮಾಂಸದ ಅಂಗಡಿ ಇಟ್ಟುಕೊಂಡಿದ್ದ. ರಾಧಾ ಮತ್ತು ಆಕೆಯ ತಂದೆ ಜೀವನ ನಿರ್ವಹಣೆಗಾಗಿ ಪುಟ್ಟದೊಂದು ಅಂಗಡಿ ಇಟ್ಟುಕೊಂಡಿದ್ದರು. ಅಂಗಡಿಯಲ್ಲಿ ಕುಳಿತಿರುವಾಗಲೇ ರಾಧಾ ಮೇಲೆ ನಾಗೇಶ ಹಲ್ಲೆ ನಡೆಸಿದ್ದಾನೆ. ಆರೋಪಿಯನ್ನು ಹಿಡಿಯಲು ಗ್ರಾಮಸ್ಥರು ದೊಣ್ಣೆಗಳೊಂದಿಗೆ ಸ್ಥಳಕ್ಕೆ ಹೋದಾಗ ಆರೋಪಿ ಮನೆಯೊಂದರಲ್ಲಿ ಸೇರಿಕೊಂಡಿದ್ದಾನೆ.ಕೈಯಲ್ಲಿ ಬೆಂಕಿಪೊಟ್ಟಣ ಹಿಡಿದು ಯಾರಾದರೂ ಮುಂದೆ ಬಂದರೆ ಗ್ಯಾಸ್‌ ಸೋರಿಕೆ ಮಾಡಿ ಸಿಲಿಂಡರ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
*ಆರೋಪಿ ಕಾಲಿಗೆ ಗುಂಡೇಟು*
ವಿಷಯ ತಿಳಿದು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದ ಪೊಲೀಸರು ಮನೆಯಲ್ಲಿ ಅವಿತು ಕುಳಿತಿದ್ದ ಆರೋಪಿಗೆ ಶರಣಾಗಲು ಸೂಚಿಸಿದರು. ಆದರೆ, ಆರೋಪಿ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದಾಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದರು. ಕೆಳಗೆ ಬಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದರು. ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!