
ಉದಯವಾಹಿನಿ ಕುಶಾಲನಗರ : ರಾಜ್ಯ ಸರ್ಕಾರದ “ಸಸ್ಯ ಶ್ಯಾಮಲಾ” ಕಾರ್ಯಕ್ರಮವನ್ನು ಕುಶಾಲನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಾಸಕ ಡಾ. ಮಂತರ್ ಗೌಡ ಗಿಡನೆಡುವ ಮೂಲಕ ಉದ್ಘಾಟಿಸಿದರು.ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ , ಇಂದಿನ ವಾತಾವರಣದಲ್ಲಿ ಜಾಗತಿಕ ತಾಪಮಾನ ಹೆಚ್ಚುವಿಕೆ, ಅನಾವೃಷ್ಟಿ, ಅರಣ್ಯ ನಾಶ ಮುಂತಾದ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು ಪ್ರತಿಯೊಬ್ಬರೂ ಕನಿಷ್ಠ ವರ್ಷಕ್ಕೊಂದಾದರೂ ಗಿಡವನ್ನು ನೆಟ್ಟು ಪೋಷಿಸುವ ಮೂಲಕ ತಮ್ಮನ್ನು ತೊಡಗಿಸಿಕೊಳ್ಳಬೇಕು, ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣದಿಂದಲೇ ಗಿಡ ನೆಡಲು ಮತ್ತು ಪೋಷಿಸುವಲ್ಲಿ ಮುಂದಾಗಬೇಕು ಹಸಿರಿನಿಂದ ಕಂಗೊಳಿಸುವ ಶಾಲೆಯ ವಾತಾವರಣವು ಕಲಿಕೆಗೆ ಮತ್ತು ಸಾಧನೆಗೆ ಹೆಚ್ಚು ಪ್ರೇರಣೆ ನೀಡುತ್ತದೆ, ಎಲ್ಲರೂ ಒಗ್ಗಟ್ಟಾದರೆ, ಒಗ್ಗಟ್ಟಾಗಿ ಪರಿಸರವನ್ನು ಬೆಳೆಸಿದರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಗಾಳಿ, ಮಳೆ ಮತ್ತು ಪ್ರಕೃತಿಯ ಲಾಭವನ್ನು ಪಡೆಯಬಹುದು ಮತ್ತು ಪ್ರತಿಯೊಬ್ಬರೂ ತಮ್ಮ ಪರಿಸರದಲ್ಲಿ ಗಿಡ ನೆಡುವುದು ಉತ್ತಮವಾದ ಅಭ್ಯಾಸ ಎಂದರು. ಕರ್ನಾಟಕ ಸರ್ಕಾರದ ಕಳೆದ ಆಯವ್ಯಯದಲ್ಲಿ ಘೋಷಿತವಾಗಿದ್ದ ಶಾಲಾ-ಕಾಲೇಜುಗಳಲ್ಲಿರುವ ಸ್ಥಳಾವಕಾಶದಲ್ಲಿ ಗಿಡಗಳನ್ನು ನೆಟ್ಟು ಒಂದು ವರ್ಷದವರೆಗೆ ಜಾಗೃತವಹಿಸಬೇಕು ಎಂಬ ಆದೇಶದ ಮೇರೆಗೆ ಈ ಕಾರ್ಯಕ್ರಮ ಆಯೋಜಿತವಾಗಿದೆ ಎಂದರು.
ಈ ಸಂದರ್ಭ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜೇಶ್ , ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪ, ಶಾಲೆಯ ಸಹ ಶಿಕ್ಷಕರು, ಸಿಬ್ಬಂಧಿ ವರ್ಗ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ವಿ.ಪಿ ಶಶಿಧರ್, ಕೆ.ಪಿ ಚಂದ್ರಕಲ, ಪುರಸಭೆ ಸದಸ್ಯರುಗಳಾದ ಪ್ರಮೋದ್ ಮುತ್ತಪ್ಪ, ಶೇಕ್ ಕಲೀಮುಲ್ಲ ಮತ್ತು ಪ್ರಮುಖರು ಉಪಸ್ಥಿತರಿದ್ದರು.
