ಉದಯವಾಹಿನಿ, ಬೆಂಗಳೂರು: ಎಂಎಲ್ ಎ ಸೀಟು ವಂಚನೆ ಪ್ರಕರಣದ ಮೂರನೇ ಆರೋಪಿ ಹಿರೇಹಡಗಲಿಯ ಸದ್ಗುರು ಶಿವಯೋಗಿ ಹಾಲಸ್ವಾಮಿ ಸಂಸ್ಥಾನ ಮಠದ ಅಭಿನವ ಹಾಲವೀರಪ್ಪಜ್ಜ ವಂಚನೆ ಮಾಡಿ ಬಂದ ಹಣದಲ್ಲಿ ಹಲವಾರು ಕಡೆ ಹೂಡಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಹಾಲವೀರಪ್ಪಜ್ಜ ಅವರು ತಮ್ಮ ಪತ್ನಿಯ ತಂದೆ ಮಲ್ಲಯ್ಯ ತುಂಬಿನಕೆರೆ ಅವರ ಹೆಸರಿನಲ್ಲಿ ತಾಲೂಕಿನ ಕೊಳಚಿ ಗ್ರಾಮದಲ್ಲಿ ೧೦ ಎಕರೆ ಜಮೀನು ಖರೀದಿಸಿದ್ದು, ಇದರಲ್ಲಿ ಕಬ್ಬು ಬೆಳೆದಿದ್ದಾರೆ. ಅಲ್ಲದೆ, ಹಿರೇಹಡಗಲಿ ಗ್ರಾಮದ ಹೊರವಲಯದಲ್ಲಿರುವ ದರ್ಗಾದ ಹಿಂದೆ ೧ ಎಕರೆ ಜಮೀನು ಖರೀದಿ ಮಾಡಿದ್ದಾರೆ.
ಜೊತೆಗೆ, ಹಿರೇಹಡಗಲಿ-ಹಗರನೂರು ಮಧ್ಯೆ ೪೦ ಲಕ್ಷ ವೆಚ್ಚದಲ್ಲಿ ಅರ್ಧ ಎಕರೆ ಜಾಗದಲ್ಲಿ ಹಿರೇಹಡಗಲಿ ಚಂದ್ರಪ್ಪ ಎಂಬುವರ ಹೆಸರಿನಲ್ಲಿ ಪೆಟ್ರೋಲ್ ಬಂಕ್ ನಿರ್ಮಿಸಿದ್ದಾರೆ. ಹಿರೇಹಡಗಲಿ- ಮಾಗಳ ರಸ್ತೆ ಪಕ್ಕದಲ್ಲೇ ಪ್ಲಾಟ್‌ವೊಂದನ್ನು ೧೬ ಲಕ್ಷಕ್ಕೆ ಖರೀದಿಸಿದ್ದಾರೆ.
ಈ ಮಧ್ಯೆ, ಹಿರೇಹಡಗಲಿ-ಮಾಗಳ ರಸ್ತೆಯಲ್ಲಿ ಪಿತ್ರಾರ್ಜಿತವಾಗಿ ಇವರಿಗೆ ೮ ಎಕರೆ ಜಮೀನು ಬಂದಿದ್ದು, ಈ ನಿವೇಶನದಲ್ಲಿ ಸುಮಾರು ೮೦ ಲಕ್ಷ ವೆಚ್ಚದಲ್ಲಿ ದೊಡ್ಡ ಬಂಗಲೆ ನಿರ್ಮಾಣವಾಗುತ್ತಿದೆ.
ಜೊತೆಗೆ ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಯ ಜೀವನ ಶೈಲಿಯೇ ಬದಲಾವಣೆಯಾಗಿತ್ತು. ಹಳೆ ಕಾರು ಮಾರಾಟ ಮಾಡಿ, ಹೊಸ ಇನ್ನೋವಾ ಕಾರಿನಲ್ಲಿ ಸುತ್ತಾಡುತ್ತಿದ್ದರು. ಜತೆಗೆ, ಬೆಂಗಳೂರಿನ ಜಯನಗರ ಬಡಾವಣೆಯಲ್ಲಿ ಮನೆಯೊಂದನ್ನು ಖರೀದಿಸಿದ್ದು, ಚುನಾವಣೆ ವೇಳೆ ಅಲ್ಲೇ ಹೆಚ್ಚು ತಂಗುತ್ತಿದ್ದು ಮಠದಲ್ಲಿ ಹೆಚ್ಚಾಗಿ ಇರುತ್ತಿರಲಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.

 

Leave a Reply

Your email address will not be published. Required fields are marked *

error: Content is protected !!