ಉದಯವಾಹಿನಿ,ನವದೆಹಲಿ: ಭಾರತ ಈಗಾಗಲೇ ಹಲವು ದೇಶಗಳ ಜೊತೆ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದ್ದು, ಇದರಲ್ಲಿ ಕೆನಡಾ ಕೂಡ ಒಂದಾಗಿದೆ. ಆದರೆ ಖಲಿಸ್ತಾನಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವಿನ ಸಂಬಂಧದಲ್ಲಿ ಕೊಂಚ ಹಿನ್ನಡೆ ತಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಅಕ್ಟೋಬರ್‌ನಲ್ಲಿ ಭಾರತಕ್ಕೆ ಕಳುಹಿಸಲು ನಿರ್ಧರಿಸಲಾಗಿದ್ದ ವ್ಯಾಪಾರ ನಿಯೋಗದ ಭೇಟಿಯನ್ನು ಕೆನಡಾ ಇದೀಗ ಮುಂದೂಡಿದೆ.
ಇತ್ತೀಚಿಗಿನ ದಿನಗಳಲ್ಲಿ ಕೆನಡಾದಲ್ಲಿ ಭಾರತ ವಿರೋಧಿ ಖಲಿಸ್ತಾನಿಗಳ ಆರ್ಭಟ ಹೆಚ್ಚಾಗುತ್ತಿದ್ದು, ಭಾರತ ಈಗಾಗಲೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದೆ. ಇದೆ ಸಮಸ್ಯೆ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಕೆನಡಾ ವಿರುದ್ಧ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಸಮಗ್ರ ಮಾತುಕತೆಗಳು ಕೂಡ ಸ್ಥಗಿತಗೊಂಡಿದೆ. ಇದರ ಭಾಗವಾಗಿ ಮುಂದಿನ ಅಕ್ಟೋಬರ್‌ನಲ್ಲಿ ಭಾರತಕ್ಕೆ ಆಗಮಿಸಲಿದ್ದ ವ್ಯಾಪಾರ ನಿಯೋಗದ ಭೇಟಿಯನ್ನು ಕೂಡ ಇದೀಗ ಕೆನಡಾ ಮುಂದೂಡಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆನಡಾದ ವ್ಯಾಪಾರ ಸಚಿವೆ ಮೇರಿ ಎನ್‌ಜಿ ಅವರ ವಕ್ತಾರರು ವ್ಯಾಪಾರ ನಿಯೋಗದ ಭೇಟಿ ಮುಂದೂಡಿದ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ. ಅಲ್ಲದೆ ಮುಂದಿನ ದಿನಾಂಕದ ಬಗ್ಗೆ ಕೂಡ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಅಕ್ಟೋಬರ್ ೯ರಂದು ಮುಂಬೈಗೆ ಕೆನಡಾದ ವ್ಯಾಪಾರ ನಿಯೋಗವು ಭೇಟಿಗೆ ಯೋಜನೆ ಮಾಡಿತ್ತು. ಆಟೋಮೊಬೈಲ್, ಕೃಷಿ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ಕ್ಷೇತ್ರಗಳ ಮೇಲೆ ಭೇಟಿಯು ಪ್ರಮುಖ ಮಾತುಕತೆ ನಡೆಸಲಿತ್ತು. ಆದರೆ ಇದೀಗ ನಿಯೋಗದ ಭೇಟಿಯನ್ನು ಅಚ್ಚರಿಯ ರೀತಿಯಲ್ಲಿ ಮುಂದೂಡಲಾಗಿದೆ. ಕೆನಡಾದಲ್ಲಿ ಭಾರತ ವಿರೋಧಿ ಕೃತ್ಯಗಳು ನಡೆಯುತ್ತಿದೆ ಎಂದು ಭಾರತ ವಾದ ಮಂಡಿಸಿದರೆ ಅತ್ತ ಕೆನಡಾವು ತನ್ನ ದೇಶದ ರಾಜಕಾರಣದಲ್ಲಿ ವಿದೇಶಿ ಹಸ್ತಕ್ಷೇಪವಾಗುತ್ತಿದೆ ಎಂದು ಆರೋಪಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!