ಉದಯವಾಹಿನಿ ಕುಶಾಲನಗರ : ಸರ್ಕಾರಿ ನೌಕರರು ನಿಯಮಾನುಸಾರ ಕಾಲ ಮಿತಿಯೊಳಗೆ ಕರ್ತವ್ಯ ನಿರ್ವಹಿಸಿದ್ದಲ್ಲಿ ಜಿಲ್ಲಾಡಳಿತಕ್ಕೆ ಒಳ್ಳೆಯ ಹೆಸರು ಬರಲಿದೆ. ಇದರಿಂದ ಸರ್ಕಾರಕ್ಕೆ ಉತ್ತಮ ಹೆಸರು ದೊರೆಯಲಿದೆ. ಆ ನಿಟ್ಟಿನಲ್ಲಿ ಸಾರ್ವಜನಿಕರನ್ನು ಸತಾಯಿಸದೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ಎಂ.ಎಸ್.ಪವನ್ ಕುಮಾರ್ ಅವರು ಹೇಳಿದ್ದಾರೆ.
ನಗರದ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರಿಂದ ಶುಕ್ರವಾರ ದೂರು ಅರ್ಜಿ ಸ್ವೀಕರಿಸಿ ಅವರು ಮಾತನಾಡಿದರು. ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಆಗಮಿಸಿದಾಗ ಸೌಜನ್ಯದಿಂದ ನಡೆದುಕೊಳ್ಳಬೇಕು. ಸಾರ್ವಜನಿಕರನ್ನು ಕುಳಿತು ಮಾತನಾಡಿಸಬೇಕು. ತಮ್ಮ ಹಂತದಲ್ಲಿ ಕೆಲಸ ಆದಲ್ಲಿ ಕಾಲ ಮಿತಿಯಲ್ಲಿ ಮಾಡಿಕೊಡಬೇಕು. ಕೆಲಸ ಆಗದಿದ್ದಲ್ಲಿ ಹಿಂಬರಹವನ್ನಾದರೂ ನೀಡಬೇಕು ಎಂದು ಲೋಕಾಯುಕ್ತ ಡಿವೈಎಸ್‌ಪಿ ಅವರು ಸಲಹೆ ಮಾಡಿದರು. ಸರ್ಕಾರಿ ಕಚೇರಿಗಳಲ್ಲಿ ಮಾಜಿ ಸೈನಿಕರು ಹಾಗೂ ವೃದ್ಧರಿಗೆ ಪ್ರಥಮ ಆದ್ಯತೆ ನೀಡಿ ಕೆಲಸ ಮಾಡಬೇಕು. ಮಹಿಳೆಯರು ಹಾಗೂ ಇತರರಿಗೆ ಹಲವು ದಾಖಲಾತಿ, ಪ್ರಮಾಣ ಪತ್ರಗಳಿಗೆ ಕಚೇರಿಗೆ ಆಗಮಿಸಿದಾಗ ನಿಯಮಾನುಸಾರ ಕೆಲಸ ಮಾಡಿಕೊಡಬೇಕು ಎಂದರು.
ಪ್ರತೀ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಗುರುತಿನ ಚೀಟಿಯನ್ನು ಹೊಂದಿರಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಸಮವಸ್ತçವನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಪವನ್ ಕುಮಾರ್ ಅವರು ನಿರ್ದೇಶನ ನೀಡಿದರು. ಸರ್ಕಾರಿ ನೌಕರರು ಸಮಾಜಕ್ಕೆ ಜವಾಬ್ದಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ಎಲ್ಲಾ ಕಚೇರಿಗಳಲ್ಲಿ ಲೋಕಾಯುಕ್ತ ಫಲಕವನ್ನು ಅಳವಡಿಸಬೇಕು. ದಾಖಲೆ ನೆಪದಲ್ಲಿ ಕಾಲ ವಿಳಂಬ ಮಾಡಬಾರದು ಎಂದು ಲೋಕಾಯುಕ್ತ ಡಿವೈಎಸ್‌ಪಿ ಅವರು ಹೇಳಿದರು.ಶುಕ್ರವಾರ ನಡೆದ ದೂರು ಅರ್ಜಿ ಸ್ವೀಕಾರ ಸಂದರ್ಭದಲ್ಲಿ ೮ ದೂರು ಅರ್ಜಿಗಳು ದಾಖಲಾಗಿದ್ದು, ಕಂದಾಯ ಹಾಗೂ ಭೂ ದಾಖಲೆಗಳ ಇಲಾಖೆಗೆ ಒಳಪಟ್ಟಿವೆ ಎಂದು ಪವನ್ ಕುಮಾರ್ ಅವರು ತಿಳಿಸಿದರು. ೯೪ಸಿ. ಫೌತಿ ಖಾತೆ, ಆರ್‌ಟಿಸಿ ತಿದ್ದುಪಡಿ, ಮಳೆ ಹಾನಿ ಪರಿಹಾರ, ಬೀಟೆ ಮರ ಕಡಿಯಲು ಸರ್ವೇ ಮಾಡಿದ್ದು, ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸದಿರುವ ಬಗ್ಗೆ ಮತ್ತಿತರ ಅರ್ಜಿಗಳು ಸ್ವೀಕೃತಿಯಾಗಿವೆ ಎಂದು ಲೋಕಾಯುಕ್ತ ಡಿವೈಎಸ್‌ಪಿ ಅವರು ತಿಳಿಸಿದರು.ಹೆಚ್ಚಿನ ಮಾಹಿತಿಗೆ ೦೮೨೭೨-೨೯೫೨೯೭ ಹಾಗೂ ಲೋಕಾಯುಕ್ತ ಡಿವೈಎಸ್‌ಪಿ ಅವರ ಇಲಾಖಾ ಮೊಬೈಲ್ ಸಂಖ್ಯೆ ೯೩೬೪೦೬೨೫೭೮ ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
