
ಉದಯವಾಹಿನಿ, ಶಿಡ್ಲಘಟ್ಟ : ನಗರದ ಪೊಲೀಸ್ ಠಾಣೆಯಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ತ ಶನಿವಾರ ಪೊಲೀಸ್ ಅಧಿಕಾರಿಗಳು ಶಾಂತಿಸಭೆ ನಡೆಸಿದರು.ಸಿಪಿಐ ನಂದಕುಮಾರ್ ಮಾತನಾಡಿ, ಎಲ್ಲಾ ಕೋಮಿನ ಜನರೊಂದಿಗೆ ಗೌರಿ-ಗಣೇಶ ಹಬ್ಬವನ್ನು ಸೌಹಾರ್ದತೆಯಿಂದ ಆಚರಣೆ ಮಾಡಬೇಕು. ಹಬ್ಬಗಳ ಆಚರಣೆಯಲ್ಲಿ ಯುವಕರ ಪಾತ್ರ ಮಹತ್ತರವಾಗಿದ್ದು, ಯುವ ಪಡೆಯ ತಂಡ ರಚಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.ಗೌರಿ ಗಣೇಶ ಪ್ರತಿಷ್ಠಾಪನೆ ಮಾಡುವಂತಹ ಸ್ಥಳದಲ್ಲಿ ಹಾಗೂ ವಿಸರ್ಜನೆ ಮಾಡುವ ತನಕ ಸುರಕ್ಷತೆಯಿಂದ ಇರಬೇಕು. ನಗರದ ಪುರಸಭೆ ಹಾಗೂ ಗ್ರಾಮೀಣ ಭಾಗದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳಿಂದ ಅನುಮತಿ ಪತ್ರವನ್ನು ಖಡ್ಡಾಯವಾಗಿ ಪಡೆದಿರಬೇಕು, ಬೆಸ್ಕಾಂ ಕಛೇರಿಯಿಂದ ವಿದ್ಯುತ್ ಪರವಾನಗಿಯನ್ನು ಹಾಗೂ ಠಾಣೆಯಿಂದ ಅನುಮತಿ ಪತ್ರವನ್ನು ತಪ್ಪದೇ ಪಡೆದಿರಬೇಕು. ಯಾವುದೇ ರೀತಿಯ ವಿದ್ಯುತ್ ಅವಘಡ, ಬೆಂಕಿ ಅವಘಡ ಹಾಗೂ ಇತರೆ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರಬೇಕು. ಯಾವುದೇ ರೀತಿಯ ಡಿಜೆ ಸೌಂಡ್ ಗಳನ್ನು ಬಳಕೆ ಮಾಡುವಂತಿಲ್ಲ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ಒಳಗೆ ಧ್ವನಿ ವರ್ಧಕಗಳನ್ನು ಬಳಸಬೇಕು ಹತ್ತು ಗಂಟೆಯ ನಂತರ ಬಳಸುವಂತಿಲ್ಲ, ಗೌರಿ ಗಣೇಶನ ವಿಸರ್ಜನೆ ಸಮಯದಲ್ಲಿ ಚಿಕ್ಕ ಮಕ್ಕಳನ್ನು ನೀರಿನೊಳಗೆ ಇಳಿಸಬಾರದು. ಈಜು ಬರುವಂತಹ ಐದರಿಂದ ಆರು ಜನ ಮಾತ್ರ ನೀರಿಗೆ ಇಳಿದ್ದು ಗಣೇಶನನ್ನು ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ನಗರ ಠಾಣೆಯ ಪಿಎಸ್.ಐ ಎಂ ವೇಣುಗೋಪಾಲ್,ಗ್ರಾ ಠಾಣೆಯ ಪಿಎಸ್ ಐ ಸುನೀಲ್ ಕುಮಾರ್ ,ಪದ್ಮಾವತಮ್ಮ,ದಿಬ್ಬೂರಹಳ್ಳಿ ಠಾಣೆಯ ಪಿಎಸ್ಐ ರಾಜೇಶ್ವರಿ,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ಜಾಮೀಯಾ ಮಸೀದಿ ಮುಖ್ಯಸ್ಥ ಹೆಚ್ ಎಸ್ ರಫೀಕ್, ನಗರ ಸಭೆ ಸದಸ್ಯ ನಾರಾಯಣಸ್ವಾಮಿ, ಶಂಕರಪ್ಪ,ಹರೀಶ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
