ಉದಯವಾಹಿನಿ , ದೆಹಲಿ: ಸ್ವತಹ ಕೆನಡಾ ಸರ್ಕಾರವೇ ಬೆಂಬಲಕ್ಕೆ ನಿಂತಿರುವ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ಖಲಿಸ್ತಾನ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದೆ. ಕೆನಡಾದಲ್ಲಿ ಖಲಿಸ್ತಾನಿ ಪರ ಸಂಘಟನೆಗಳು, ಅಲ್ಪಸಂಖ್ಯಾತ ಹಿಂದೂಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದು, ದೇವಾಲಯಗಳನ್ನು ವಿರೂಪಗೊಳಿಸಿದ ಹಲವು ನಿದರ್ಶನಗಳು ವರದಿಯಾಗಿವೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
“ಕೆನಡಾದಲ್ಲಿರುವ ಭಾರತೀಯ ಮಿಷನ್ ನ ಭದ್ರತಾ ಸಿಬ್ಬಂದಿಗೆ ಮತ್ತು ರಾಜತಾಂತ್ರಿಕ ಅಧಿಕಾರಿಗಳಿಗೆ ಖಲಿಸ್ತಾನಿಗಳು ಬಹಿರಂಗವಾಗಿ ಬೆದರಿಕೆ ಹಾಕಿರುವುದು ತೀರಾ ಗಂಭೀರ ಬೆಳವಣಿಗೆ ಹಾಗೂ ವಿಯೆನ್ನಾ ಸಮ್ಮೇಳನದಲ್ಲಿ ಕೆನಡಾ ಒಪ್ಪಿಕೊಂಡಿರುವ ಹೊಣೆಗಾರಿಕೆಗೆ ಸವಾಲು ಎಂದು ಪರಿಸ್ಥಿತಿಯ ಬಗ್ಗೆ ನಿಗಾ ಇಟ್ಟಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಹುಶಃ ಮಾನವ ಹಕ್ಕುಗಳನ್ನು ಅಳೆಯಲು ಭಿನ್ನ ಮಾನದಂಡಗಳು ಇದ್ದಂತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
